ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಪೋಷಕರ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2021-2022ನೇ ಸಾಲಿನ ರಕ್ಷಕ -ಶಿಕ್ಷಕ ಸಂಘಕ್ಕೆ ಅಧ್ಯಕ್ಷರಾಗಿ ಆರ್ಲಪದವು ಹಾಲು ಉತ್ಪಾದಕರ ಸಂಘದ ಚೀಫ್ ಎಕ್ಸಕ್ಯೂಟಿವ್ ಆಫೀಸರ್ ಹಾಗೂ ಕಾರ್ಯದರ್ಶಿಗಳಾದ ಸತ್ಯ ನಾರಾಯಣ ಅಡಿಗ ಹಾಗೂ ಕೋಶಾಧಿಕಾರಿಯಾಗಿ ಪ್ರಗತಿಪರ ಕೃಷಿಕರಾದ ರಾಜಗೋಪಾಲ ರೈ ಆನಾಜೆ ರವರು ಅವಿರೋಧವಾಗಿ ಆಯ್ಕೆಯಾದರು.

ಜೂ.8 ರಂದು ಮತ್ತು 9 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಸಭೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೆಂಕಟರಮಣ ಬೋರ್ಕರ್ ಆಗಮಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ ವರೆದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಪೋಷಕರಿಗೆ ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ವೇದಿಕೆಯಲ್ಲಿ ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರು ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಹರಿಪ್ರಸಾದ್ ಎಸ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಂಜುಳಾ ದೇವಿ, ಸಮಾಜ ಕಾರ್ಯ ವಿಭಾಗ ಮುಖ್ಯಸ್ಥರಾದ ಡಾ. ನಿರೀಕ್ಷಿಣ್ ಸಿಂಗ್ ಗೌಗಿ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಉದಯರಾಜ್, ಮತ್ತು ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ತಿಮ್ಮಯ್ಯ ಎಲ್ ಎನ್ ಉಪಸ್ಥಿತರಿದ್ದು, ವಿಭಾಗವಾರು ಮಾಹಿತಿಯನ್ನು ನೀಡಿದರು. ಬಳಿಕ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ರಕ್ಷಕ -ಶಿಕ್ಷಕ ಸಂಘಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಕಾಲೇಜಿನ ಗ್ರಂಥಪಾಲಕರು ಹಾಗೂ ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ರಾಮ ಕೆ. ರವರು ಈ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.
























