ಪುತ್ತೂರು: ಆಜಾದಿ ಕೀ ಅಮೃತ ಮಹೋತ್ಸವ ಪ್ರಯುಕ್ತ ‘ಬೃಹತ್ ಉಚಿತ ಲಸಿಕಾ ಶಿಬಿರವು'(ಬೂಸ್ಟರ್ ಡೋಸ್) ಜು.23 ರಂದು ಜಿ.ಪಂ.ಹಿ.ಪ್ರಾ.ಶಾಲೆ ಪರ್ಲಡ್ಕದಲ್ಲಿ ಜರುಗಿತು.

ನಗರಸಭಾಧ್ಯಕ್ಷರಾದ ಜೀವಂಧರ್ ಜೈನ್ ದೀಪ ಬೆಳಗಿಸುವ ಮೂಲಕ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟನೆ ಮಾಡಿ, ಇಡೀ ವಿಶ್ವಕ್ಕೇ ಮಾದರಿಯಾದ ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಮೊದಲ ಹಾಗೂ ಎರಡನೇ ಕೊರೋನಾ ವ್ಯಾಕ್ಸಿನ್ ಕಾರ್ಯಕ್ರಮ ಇದೀಗ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆ ಕೂಡಾ ದೇಶದಾದ್ಯಂತ ನಡೆಯುತ್ತಿದೆ. ನಮ್ಮೂರು ಕೂಡಾ ಕೊರೋನಾ ಮುಕ್ತವಾಗಲು ಎಲ್ಲಾ ನಾಗರಿಕರನ್ನು ತಲುಪಲು ಸುಲಭ ಸಾಧ್ಯವಾಗುವಂತೆ ಪ್ರತಿ ವಾರ್ಡ್ ಗಳಲ್ಲಿಯೂ ಈ ರೀತಿಯ ಲಸಿಕಾ ಶಿಬಿರ ಆಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.
ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ ಪ್ರಾಸ್ತಾವಿಕ ಮಾತನಾಡಿ, ವಾರ್ಡ್-19ರ ಸುತ್ತಮುತ್ತಲಿನ ಸ್ಥಳೀಯರಿಗೆ ಅನುಕೂಲವಾಗುವಂತೆ ಪರ್ಲಡ್ಕ ಶಾಲೆಯಲ್ಲಿ ಲಸಿಕಾ ಶಿಬಿರ ಏರ್ಪಡಿಸಲಾಗಿದೆ. ದೇಶದಾದ್ಯಂತ ಜುಲೈ 16 ರಿಂದ ಸೆಪ್ಟೆಂಬರ್ 30ರ ವರೆಗೆ ಉಚಿತ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದರು.

ಡಾ.ಸುಶ್ಮಿತಾ ಪೈ, ನರ್ಸ್ ಗಳಾದ ಸಿಸ್ಟರ್ ತ್ರಿವೇಣಿ, ಮೀನಾಕ್ಷಿ ಹಾಗೂ ಆಶಾ ಕಾರ್ಯಕರ್ತೆ ವೀಣಾ ಚಿದಾನಂದ್ ಆಚಾರ್ಯ ಶಿಬಿರದಲ್ಲಿ ಸಹಕರಿಸಿದರು. ಪ್ರಮುಖರಾದ ಶಿವಕುಮಾರ್ ಕಲ್ಲಿಮಾರ್, ಪುರುಷೋತ್ತಮ್ ನ್ಯಾಕ್, ರವಿರಾಜ್, ಸತೀಶ್, ವಿಕ್ರಮ್ ಪರ್ಲಡ್ಕ ಉಪಸ್ಥಿತರಿದ್ದರು. ವಿದ್ಯಾಗೌರಿ ಸ್ವಾಗತಿಸಿ, ಶಾಲಾ ಮುಖ್ಯಗುರುಗಳಾದ ವತ್ಸಲಾ ವಂದಿಸಿದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡರು.
