ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಉದ್ವಿಗ್ನತೆ ಸಹಜ ಸ್ಥಿತಿಗೆ ತಲುಪುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿರೋದು ಪ್ರಕ್ಷುಬ್ಧ ವಾತಾವಾರಣ ನಿರ್ಮಿಸಿದೆ. ಈ ನಡುವೆ ನಿನ್ನೆ ರಾತ್ರಿ ಹತ್ಯೆಯಾದ ಫಾಜೀಲ್ (23) ದಫನ್ ಕ್ರಿಯೆಯನ್ನು ಇಂದು ನಡೆಸಲಾಗುತ್ತಿದೆ.
ಸುರತ್ಕಲ್ ನ ಹೊರವಲಯ ಮಂಗಲ ಪೇಟೆಯಲ್ಲಿರುವ ಮೊಯಿದ್ದೀನ್ ಜುಮ್ಮಾ ಮಸೀದಿಗೆ ಫಾಜೀಲ್ ಮೃತದೇಹವನ್ನು ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಸೀದಿ ಬಳಿ ಸಾವಿರಾರು ಮಂದಿ ಸೇರಿದ್ದು, ಸಾರ್ವಜನಿಕ ದರ್ಶನ ಆದ ಬಳಿಕ ದಫನ್ ಕ್ರಿಯೆ ನಡೆಸಲಾಗುತ್ತದೆ. ಮಸೀದಿಯ ಹಿಂಭಾಗದಲ್ಲಿರುವ ದಫನ್ ಭೂಮಿಯಲ್ಲಿ ದಫನ್ ಕ್ರಿಯೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ, ಆದಷ್ಟು ಬೇಗ ದಫನ್ ಕ್ರಿಯೆ ಮಾಡುವಂತೆ ಮುಸ್ಲಿಂ ಮುಖಂಡರ ಬಳಿ ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲೆಯ ನಾನಾ ಕಡೆಯಿಂದ ಮುಸ್ಲಿಂ ಬಾಂಧವರು ಆಗಮಿಸುತ್ತಿದ್ದಾರೆ. ಇದೇ ವೇಳೆ ಶಾಂತಿ ಕಾಪಾಡುವಂತೆ ಮುಸಲ್ಮಾನ ಧರ್ಮಗುರುಗಳು ಜನರ ಬಳಿ ಮನವಿ ಮಾಡಿದ್ದಾರೆ.


























