ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿಷೇಧದ ನಡುವೆಯೂ ಪ್ರಮೋದ್ ಮುತಾಲಿಕ್ ಮಂಗಳೂರಿಗೆ ಆಗಮಿಸಿದ್ದು, ಈ ಹಿನ್ನೆಲೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರವೇಶಕ್ಕೆ ನಿಷೇಧ ವಿಧಿಸಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದರು.
ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳನ್ನು ಪರಿಗಣಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರವೇಶಕ್ಕೆ ಜು.28ರಿಂದ ಮುಂದಿನ ಆದೇಶದವರೆಗೆ ನಿಷೇಧ ಜಾರಿಯಲ್ಲಿ ಇರುವುದಾಗಿ ಜಿಲ್ಲಾಧಿಕಾರಿ ಆದೇಶಿಸಿದ್ದರು.
ಆದೇಶದ ನಡುವೆಯೂ ಮುತಾಲಿಕ್ ಮಂಗಳೂರಿಗೆ ಆಗಮಿಸಿದ್ದು, ಈ ಹಿನ್ನೆಲೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.



























