ಸುಳ್ಯ: ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಹತ್ಯೆಯಾದ ಕಳಂಜ ಗ್ರಾಮದ ಮಸೂದ್ ರವರ ಮನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆ.1 ರಂದು ಭೇಟಿ ನೀಡಿದರು.
ಮನೆಯಲ್ಲಿದ್ದ ಮಸೂದ್ ಅವರ ಸಹೋದರರು, ಚಿಕ್ಕಪ್ಪ ಸೇರಿ ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಮುಖ್ಯಮಂತ್ರಿ, ಸಂತ್ರಸ್ತ ಕುಟುಂಬಕ್ಕೂ ಪರಿಹಾರವಾಗಿ 5 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಕರಾವಳಿ ಜಿಲ್ಲೆಯಲ್ಲಿ ನಡೆದಿರುವ ಸಾಲು ಸಾಲು ಹತ್ಯೆ ಪ್ರಕರಣ ಜನರನ್ನು ಆತಂಕಕ್ಕೀಡು ಮಾಡಿದೆ. ಹಂತಕರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮತ್ತೆಂದೂ ಮರುಕಳಿಸಬಾರದು .ತೀವ್ರ ಶೋಕದಲ್ಲಿರುವ ಕುಟುಂಬದವರು ಈ ನೋವಿನಿಂದ ಹೊರಬರಬೇಕು. ಪಕ್ಷದ ವತಿಯಿಂದ ಆ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ಈ ಸಂದರ್ಭ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ, ಪಕ್ಷದ ಜಿಲ್ಲಾಧ್ಯಕ್ಷ ಮಾಧವ ಗೌಡ, ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಸುಳ್ಯ ಜೆಡಿಎಸ್ ಅಧ್ಯಕ್ಷ ಸುಕುಮಾರ್ ಕೋಡುಗುಳಿ, ರಾಕೇಶ್ ಕುಂಟಿಕಾನ, ನಪಂ ಸದಸ್ಯ
ಕೆ.ಎಸ್.ಉಮರ್, ರಮೀಝಾ ಬಾನು, ಹೈದರ್ ಪರ್ತಿಪ್ಪಾಡಿ, ಸುಶೀಲ್ ನೊರೋನ್ಹಾ, ಸೈಯದ್ ಮೀರಾ ಸಾಹೇಬ್ ಕಡಬ, ರತ್ನಾಕರ ಸುವರ್ಣ, ಸುಮತಿ ಹೆಗ್ಡೆ, ಅಶ್ರಫ್ ಕಲ್ಲೇಗ ಮತ್ತಿತರರು ಉಪಸ್ಥಿತರಿದ್ದರು.



























