ಮಂಗಳೂರು : ಮಹಮ್ಮದ್ ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸುರತ್ಕಲ್ ಠಾಣೆಯಲ್ಲಿ ಯಾವುದೇ ವಿಶೇಷ ಆತಿಥ್ಯ ನೀಡಿಲ್ಲ, ನಿಯಮ ಮೀರಿ ನಡೆದುಕೊಂಡಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ಮಂದಿ ಪ್ರಮುಖರು ಈ ಬಗ್ಗೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಅವರು ಯಾವ ಮಾಹಿತಿ ಆಧಾರದಲ್ಲಿ ಹಾಗೆ ಹೇಳಿದ್ದಾರೆಂಬುದು ಗೊತ್ತಾಗಿಲ್ಲ. ಹಾಗೆ ಹೇಳಿಕೆ ನೀಡುವುದು ತಪ್ಪು. ಆ ರೀತಿ ಆಗಲು ಬಿಡುವುದಿಲ್ಲ. ನಾನು ಕೂಡ ಸುರತ್ಕಲ್ ಠಾಣೆಗೆ ಭೇಟಿ ನೀಡಿದ್ದೇನೆ. ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ವಿಶೇಷ ಆತಿಥ್ಯ ನೀಡಿಲ್ಲ.
ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ಯಾವ ರೀತಿ ನಡೆಸಿಕೊಳ್ಳಬೇಕೋ ಅದೇ ರೀತಿ ನಿಯಮಾನುಸಾರವೇ ನಡೆಸಿಕೊಳ್ಳಲಾಗಿದೆ. ಸೋಮವಾರ ಫಾಝಿಲ್ ಮನೆ ಬಳಿ ಹೋಗಿದ್ದೆ. ಅಲ್ಲಿ ಮಾತನಾಡಲು ಗಂಡಸರು ಯಾರೂ ಇರಲಿಲ್ಲ. ಅವರ ಕುಟುಂಬದ ಬಹುತೇಕ ಸದಸ್ಯರಲ್ಲಿ ನನ್ನ ಹಾಗೂ ಹಿರಿಯ ಅಧಿಕಾರಿಗಳ ಮೊಬೈಲ್ ನಂಬರ್ ಇದೆ. ಹಾಗಾಗಿ ಅಂತಹ ಸಂದೇಹವಿದ್ದರೆ ನೇರವಾಗಿ ಮಾತನಾಡಬಹುದಾಗಿದೆ ಎಂದು ಹೇಳಿದರು.