ಮಡಿಕೇರಿ: ಪ್ರಕರಣ ದಾಖಲಿಸಿದ ಕೇವಲ 24 ಗಂಟೆಯಲ್ಲಿ ಅಂತರ್ ರಾಜ್ಯ ವಾಹನಗಳ ಚೋರನನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ಮಾಕುಟ್ಟ ಪೊಲೀಸರು ಬಂಧಿಸಿದ ಘಟನೆ ವಿರಾಜಪೇಟೆಯ ಮಾಕುಟ್ಟ ಹೊರ ವಲಯದಲ್ಲಿ ನಡೆದಿದೆ. ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ಶರಣ್ ಎಸ್(25) ಬಂಧಿತ ಆರೋಪಿ. ಈತನಿಂದ ಒಟ್ಟು 3 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 379 ಅಡಿ ವಿರಾಜಪೇಟೆ ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ವೃತ್ತಿಯಲ್ಲಿ ಚಾಲಕನಾಗಿದ್ದಾನೆ.
ದೂರು ದಾಖಲಿಸಿಕೊಂಡ ವಿರಾಜಪೇಟೆಯ ಪೊಲೀಸರು ತನಿಖೆ ಮುಂದುವರೆಸಿದ್ದು, ಮಾಕುಟ್ಟ ವಲಯದಲ್ಲಿ ವಾಹನ ತಪಾಸಾಣೆ ಮಾಡುವ ಸಂದರ್ಭದಲ್ಲಿ ಕಳ್ಳತನವಾದ ವಾಹನ ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿರಾಜಪೇಟೆಯ ಬಿಟ್ಟಂಗಾಲದಿಂದ ಕಳವು ಮಾಡಿದ ವಾಹನವನ್ನು ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ಊಟ ಮಾಡುವಷ್ಟರಲ್ಲಿ ಓಮ್ನಿ ಮಾಯ : ಗಾಂಜಾ ವ್ಯಾಸನಿಯಾಗಿದ್ದ ಶರಣ್, ಏಪ್ರಿಲ್ 1ರಂದು ವಿರಾಜಪೇಟೆ ಬಿಟ್ಟಂಗಾಲ ನಿವಾಸಿ ಕೆ.ಎನ್.ಜಗನ್ ಅವರು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಧ್ಯಾಹ್ನ ಮನೆಗೆ ಊಟಕ್ಕೆಂದು ತೆರಳಿದ್ದಾಗ ಅವರ ಕೆಎ-03 ಎಂ-3167 ಮಾರುತಿ ಓಮ್ನಿಯನ್ನು ಕದ್ದಿದ್ದ. ಊಟ ಮುಗಿಸಿ ಹಿಂದಿರುವ ಸಂದರ್ಭದಲ್ಲಿ ನಿಲ್ಲಿಸಿದ ವಾಹನ ಕಣ್ಮರೆಯಾಗಿದೆ ಎಂದು ಸುತ್ತಮುತ್ತ ಹುಟುಕಾಟ ನಡೆಸಿದ್ದಾರೆ. ಎಲ್ಲಿಯೂ ವಾಹನದ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆ ಸಂಜೆ ವೇಳೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಹನ ಕಳವುವಾದ ಬಗ್ಗೆ ದೂರು ದಾಖಲಿದ್ದರು. ಬಳಿಕ ವಾಹನ ತಪಾಸಣೆ ವೇಳೆ ಪೊಲೀಸರು ಓಮ್ನಿಯನ್ನು ಪತ್ತೆಹಚ್ಚಿದ್ದಾರೆ.
ಅಲ್ಲದೆ ಮಾರ್ಚ್ 21ರಂದು ರಾತ್ರಿ ವಿರಾಜಪೇಟೆಯ ಮೀನು ಪೇಟೆಯಲ್ಲಿ ಅಂಗಡಿಯ ಮುಂದೆ ನಿಲ್ಲಿಸಿದ್ದ ಶಾನೀಶ್ ಅವರಿಗೆ ಸೇರಿದ ಕೆಎ-12 ಎನ್-2021 ಮಾರುತಿ ಓಮ್ನಿಯನ್ನು ಕದ್ದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಕದ್ದ ವಾಹನದಲ್ಲೇ ಮೈಸೂರು ಮತ್ತು ಇತರ ಸ್ಥಳಗಳಲ್ಲಿ ಸುತ್ತಾಡಿ, ಇಂಧನ ಖಾಲಿಯಾದ ಬಳಿಕ ಕೇರಳ-ಕೊಡಗು ಗಡಿ ಭಾಗವಾದ ಮಾಕ್ಕುಟ್ಟದ ಹೋರ ವಲಯದಲ್ಲಿ ವಾಹನಗಳನ್ನು ಅಡಗಿಸಿ, ಮತ್ತೊಂದು ಕಳ್ಳತನಕ್ಕೆ ಮುಂದಾಗಿದ್ದ ಎಂದು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ. ಆರೋಪಿ ಶರಣ್ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.