ಉಪ್ಪಿನಂಗಡಿ: ಕಳೆದ 7 ದಿನಗಳ ಹಿಂದೆ ಉಪ್ಪಿನಂಗಡಿ ಹೆದ್ದಾರಿಯ ತಿರುವಿನಲ್ಲಿ ಸಂಭವಿಸಿದ ಕಾರು ಮತ್ತು ದ್ವಿ ಚಕ್ರ ವಾಹನದ ನಡುವೆ ಡಿಕ್ಕಿಯಲ್ಲಿ ಗಾಯಗೊಂಡಿದ್ದ ದ್ವಿ ಚಕ್ರ ಸವಾರ ಇಸ್ಮಾಯಿಲ್ (67) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಆದಿತ್ಯವಾರ ಸಂಭವಿಸಿದೆ. ಮಾರ್ಚ್ 28 ರಂದು ಹೆದ್ದಾರಿ ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ಇಸ್ಮಾಯಿಲ್ ರವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ 7 ದಿನಗಳ ಚಿಕಿತ್ಸೆಗೆ ಸ್ಪಂದಿಸದೆ ಆದಿತ್ಯವಾರದಂದು ಸಾವನ್ನಪ್ಪಿದ್ದಾರೆ.
ಒಂದೆಡೆ ಮಗಳ ಮದುವೆ . . ಇನ್ನೊಂದೆಡೆ ಬದುಕಿಗೆ ವಿದಾಯ : ಇಸ್ಮಾಯಿಲ್ ರವರ ಐವರು ಹೆಣ್ಣು ಮಕ್ಕಳ ಪೈಕಿ ಕೊನೆಯ ಮಗಳ ವಿವಾಹವು ಆದಿತ್ಯವಾರ ಉಪ್ಪಿನಂಗಡಿಯ ಎಚ್ ಎಂ ಅಡಿಟೋರಿಯಮ್ ನಲ್ಲಿ ನಿಗದಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಮಗಳ ವಿವಾಹವು ನಿಗದಿಯಂತೆ ನಡೆದಿತ್ತು. ಈ ಮಧ್ಯೆ ತನ್ನ ಮಗಳ ವಿವಾಹವು ನೆರವೇರುತ್ತಿದ್ದಂತೆಯೇ ಇತ್ತ ಮಂಗಳೂರಿನ ಆಸ್ಪತ್ರೆಯಲ್ಲಿದ್ದ ಇಸ್ಮಾಯಿಲ್ ರವರು ತನ್ನ ಬದುಕಿಗೆ ವಿದಾಯ ಹೇಳಿ ನಿರ್ಗಮಿಸುವಂತಾಗಿರುವುದು ವಿಪರ್ಯಾಸವೆನಿಸಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.