ನವದೆಹಲಿ : ಕೋವಿಡ್ ಹಾವಳಿ, ಕೇಂದ್ರ-ರಾಜ್ಯ ಸರಕಾರಗಳ ತರಹೇವಾರಿ ನಿರ್ಬಂಧಗಳು, ಜೈವಿಕ ಸುರಕ್ಷಾ ವಲಯದ ಸಂಕಟಗಳ ನಡುವೆ ಈ ಬಾರಿಯ ಐಪಿಎಲ್ ಆರಂಭವಾಗಲಿದೆ. ಎಲ್ಲ ರೀತಿಯ ಸವಾಲುಗಳ ನಡುವೆ ಬಿಸಿಸಿಐ ಎ. 9ರಿಂದ ಮೇ 30ರ ವರೆಗೆ ಕೂಟ ನಡೆಸಲಿದೆ. ಎ. 9, ಶುಕ್ರವಾರ ಚೆನ್ನೈಯಲ್ಲಿ ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಾಟನ ಪಂದ್ಯ ನಡೆದರೆ ಮೇ 30ರಂದು ಅಹಮದಾಬಾದ್‌ನ ವಿಶ್ವದ ಬೃಹತ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ನಡೆಯಲಿದೆ.
ಪ್ರೇಕ್ಷಕರಿಗೆ ಪ್ರವೇಶವಿಲ್ಲ : ಕೋವಿಡ್ ಕಾರಣ ಈ ಬಾರಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ ಎಂದು ಬಿಸಿಸಿಐ ಹೇಳಿದೆ. ಆರಂಭದ ಕೆಲವು ಪಂದ್ಯ ನೋಡಿಕೊಂಡು ಮತ್ತೆ ಪ್ರವೇಶ ನೀಡುವ ಬಗ್ಗೆ ಆಲೋಚಿಸುವುದಾಗಿ ಒಂದೆರಡು ತಿಂಗಳುಗಳ ಹಿಂದೆ ಬಿಸಿಸಿಐ ಹೇಳಿತ್ತು.
ಆರೇ ತಾಣಗಳಲ್ಲಿ ಇಡೀ ಕೂಟ : ಬೆಂಗಳೂರು, ನವದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತಾ, ಅಹ್ಮದಾಬಾದ್‌ನಲ್ಲಿ ಈ ಬಾರಿಯ ಕೂಟ ನಡೆಯಲಿದೆ. ಕೋವಿಡ್ ಮುಕ್ತ ಸಂದರ್ಭ ಕನಿಷ್ಠ 8ರಿಂದ 9 ತಾಣಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಈ ಬಾರಿ ಪ್ರತೀ ತಾಣದಲ್ಲೂ ತಲಾ 10 ಪಂದ್ಯಗಳು ನಡೆಯಲಿವೆ. ವಿಶೇಷ ವೆಂದರೆ ಯಾವುದೇ ತಂಡಕ್ಕೂ ತನ್ನದೇ ನೆಲದಲ್ಲಿ ಆಡುವ ಅವಕಾಶವಿಲ್ಲ.
ಕನ್ನಡ ಸೇರಿ 8 ಭಾಷೆಗಳಲ್ಲಿ ಕಮೆಂಟ್ರಿ : ಹಿಂದಿ, ಇಂಗ್ಲಿಷ್ ಜತೆಗೆ ಭಾರತದ ಇತರ 6 ಸ್ಥಳೀಯ ಭಾಷೆಗಳಲ್ಲಿ ವೀಕ್ಷಕ ವಿವರಣೆ ಇರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಲಿ, ಮರಾಠಿ ಭಾಷಿಕರೂ ವಿವರಣೆಯನ್ನು ಕೇಳಬಹುದು. ಭಾಷೆಗಳ ಮಟ್ಟಿಗೆ ಇದು ಉತ್ತಮ ಬೆಳವಣಿಗೆ.
ಒಟ್ಟು 52 ದಿನಗಳ ಕೂಟ. ಎ. 9ರಂದು ಆರಂಭ, ಮೇ 30ಕ್ಕೆ ಮುಕ್ತಾಯ. ಐಪಿಎಲ್‌ನಲ್ಲಿ ನಡೆಯುವ ಪಂದ್ಯಗಳ ಸಂಖ್ಯೆ: 56 ಲೀಗ್ ಪಂದ್ಯ ಗಳು, ಫೈನಲ್ ಸೇರಿ 4 ಅಂತಿಮ ಸುತ್ತಿನ ಪಂದ್ಯಗಳು. ಈ ಬಾರಿ ಒಟ್ಟು 8 ತಂಡಗಳ 196 ಆಟಗಾರರು.