ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಮಯ ದೇವರ ಸವಾರಿ ಬರುವ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಡಳಿತದಿಂದ ಆದೇಶವಿರುವ ಕಾರಣ ಕಟ್ಟೆ ಸಮಿತಿ/ಮಾಲಕರು ಕಟ್ಟೆಪೂಜಾ ಸಮಯ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗಿ ದೇವಳದ ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಲಿಸಬೇಕಾದ ನಿಯಾಮಾವಳಿಗಳು : ತಮ್ಮ ಕಟ್ಟೆಯಲ್ಲಿ ಕಟ್ಟೆಪೂಜೆ ಜರಗುವ ದಿನ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ. ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಉಪಹಾರ ವಿತರಣೆಗೆ ಅವಕಾಶವಿಲ್ಲ. ಕಟ್ಟೆಯ ಬಳಿ ಸಂಬಂಧಿಸಿದವರು ಮಾತ್ರ ಇದ್ದು, ಹೆಚ್ಚು ಜನದಟ್ಟಣೆಯಾಗದಂತೆ ಜಾಗ್ರತೆ ವಹಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳತಕ್ಕದ್ದು, ಕಟ್ಟೆಯ ಸಮೀಪ ಸ್ಯಾನಿಟೈಸರ್ ಇಡಬೇಕು. ಯಾವುದೇ ನಿಯಮಗಳ ಉಲ್ಲಂಘನೆಯಾದಲ್ಲಿ ಇದಕ್ಕೆ ಸಂಬಂಧ ಪಟ್ಟವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜಾತ್ರೋತ್ಸವವನ್ನು ಯಶಸ್ವಿಯಾಗಿಸಬೇಕೆಂದು ತಿಳಿಸಿದ್ದಾರೆ.
ಜಾತ್ರೋತ್ಸವದ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮಗಳು : ಜಾತ್ರೋತ್ಸವದ ಸಲುವಾಗಿ ಏ.10 ರಂದು ಧ್ವಜಾರೋಹಣ ನಡೆಯಲಿರುವುದು. ಧ್ವಜಸ್ತಂಭಕ್ಕೆ ನೀಡುವ ಹೊರಕಾಣಿಕೆಯನ್ನು ಸಮರ್ಪಿಸುವವರು ದೇವಳದ ಒಳಗೆ 8 ಗಂಟೆಯ ಒಳಗಾಗಿ ನೀಡಬೇಕಾಗಿ ತಿಳಿಸಿದ್ದಾರೆ. ಪ್ರತಿದಿನ ದೇವರ ಬಲಿ ಉತ್ಸವದಲ್ಲಿ ಭಕ್ತಾಭಿಮಾನಿಗಳು ಕೋವಿಡ್ ನಿಯಾಮಾನುಸಾರ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವಯಂ ಸೇವಕರ ಸೂಚನೆಗಳನ್ನು ಹಾಗೂ ಧ್ವನಿವರ್ಧಕ ಉದ್ಘೋಷಕರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಅಯ್ಯಪ್ಪ ಗುಡಿಯ ಬದಿಯಲ್ಲಿ ಶಾಮಿಯಾನ ಹಾಕಿರುವ ಸ್ಥಳದಲ್ಲಿ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯನ್ನು ಮಾಡಲಾಗುವುದು ಅಲ್ಲಿಂದ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು, ಸಂಜೆ ದೇವರ ಪೇಟೆ ಸವಾರಿಯ ಸಂದರ್ಭದಲ್ಲಿಯೂ ದೇವರೊಂದಿಗೆ ನಿಯಾಮಾನುಸಾರ ನಿಗದಿತ ಸ್ವಯಂ ಸೇವಕರು, ದೇವರ ಧ್ವಜ ಪತಾಕೆ, ದೀವಟಿಗೆ, ಗ್ಯಾಸ್ ಲೈಟ್ ಹಾಗೂ ವ್ಯವಸ್ಥಾಪನಾ ಸಮಿತಿ ಪರಿವಾರ ಹೊರತು ಪಡಿಸಿ ಇತರರಿಗೆ ಅವಕಾಶವಿರುವುದಿಲ್ಲ.
ಏ.14 ರ ವಿಷು ಸಂಕ್ರಮಣದ ದಿನ ದೇವಸ್ಥಾನಕ್ಕೆ ಸರತಿಯ ಸಾಲಿನಲ್ಲಿ ಅಯ್ಯಪ್ಪ ಗುಡಿಯ ಬಲಭಾಗದಲ್ಲಿ ವ್ಯವಸ್ಥೆ ಮಾಡಿದ ಶಾಮಿಯಾನ ನೆರಳಿನಿಂದ ತೆರಳುವುದು, ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಬರುವ ಹೊತ್ತಿನಲ್ಲಿ ಭಕ್ತಾದಿಗಳು ಗುಂಪು ಸೇರದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಏ.17 ರಂದು ಶ್ರೀ ದೇವರ ದರ್ಶನ ಬಲಿ ಸಮಯದಲ್ಲಿ ನಿಯಾಮಾನುಸಾರ ದೇವಳದ ಒಳಗೆ ಬರಲು ಅವಕಾಶವಿರುವುದಿಲ್ಲ. ದೇವಳದ ಹೊರಗೆ ಹಾಕಿದ ಎಲ್ ಇಡಿ ಯಲ್ಲಿ ದೇವರ ದರ್ಶನಬಲಿಯನ್ನು ನೋಡಬಹುದಾಗಿದೆ. ಬಟ್ಟಲು ಕಾಣಿಕೆ ಸಮಯದಲ್ಲಿ ಸರತಿ ಸಾಲಿನಲ್ಲಿ ದೇವಳದ ಒಳಗೆ ಪ್ರವೇಶಿಸಿ ಬಟ್ಟಲು ಕಾಣಿಕೆ ಹಾಕಿ ಪ್ರಸಾದ ಸ್ವೀಕರಿಸಿದ ಸರತಿಯಂತೆ ಹೊರಗೆ ಹೋಗಬೇಕು. ಬ್ರಹ್ಮ ರಥೋತ್ಸವ ಸಮಯದಲ್ಲಿ ಬ್ಯಾರಿಕೇಡ್ ಮತ್ತು ಲೈಟ್ ಕಂಬದ ಮಧ್ಯ ಬಫರ್ ಝೋನ್ ಗೆ ಯಾರಿಗೂ ಪ್ರವೇಶವಿಲ್ಲ, ರಥ ಎಳೆಯುವ ಸೀಮಿತ ಸ್ವಯಂಸೇವಕರಿಗೆ ಮಾತ್ರ ಅವಕಾಶ.
ಏ.18 ರಂದು ವೀರಮಂಗಲ ಅವಭ್ರತ ಸ್ನಾನಕ್ಕೆ ದೇವರು ತೆರಳುವ ಸಂದರ್ಭ ಸವಾರಿಯಲ್ಲಿ ಭಾಗವಹಿಸಲು ಭಕ್ತಾದಿಗಳಿಗೆ ಅವಕಾಶವಿರುವುದಿಲ್ಲ.ಏ.19 ರಂದು ಧ್ವಜಾವರೋಹಣ ಸಂದರ್ಭದಲ್ಲಿಯೂ ದೇವಳದ ಒಳಗೆ ಪರಿಚಾರಕರನ್ನು ಹೊರತು ಪಡಿಸಿ ಭಕ್ತಾದಿಗಳಿಗೆ ಒಳ ಪ್ರವೇಶಕ್ಕೆ ಅವಕಾಶವಿಲ್ಲ. ಜಾತ್ರೋತ್ಸವ ವೇಳೆ ಮೊಬೈಲ್ ಚಿತ್ರೀಕರಣವನ್ನು ಮಾಡಬಾರದು, ದೇವಳದ ವತಿಯಿಂದ ಅಧಿಕೃತ ಪಾಸ್ ಪಡೆದವರಿಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ. ಜಾತ್ರೋತ್ಸವ ಸಂದರ್ಭದಲ್ಲಿ ದೇವಳದ ಗದ್ದೆಯಲ್ಲಿ ಯಾವುದೇ ಸ್ಟಾಲ್ (ಅಂಗಡಿ)ಗಳಿಗೆ ಅವಕಾಶವಿರುವುದಿಲ್ಲ, ಅಂಗಡಿ (ಸ್ಟಾಲ್ ಗಳನ್ನು) ದೇವಸ್ಥಾನದ ಸಭಾವನದಲ್ಲಿ ಇಡುವ ಅವಕಾಶವಿದ್ದು ಅದರ ಹರಾಜು ಪ್ರಕ್ರಿಯೆಯು ಏ.11 ರಂದು ನಡೆಯಲಿದೆ.ದೇವಳಕ್ಕೆ ಸಮರ್ಪಿಸುವ ಹೊರಕಾಣಿಕೆಯನ್ನು ದೇವಳದ ಹೊರ ಆವರಣದಲ್ಲಿರುವ ಕೌಂಟರ್ ನಲ್ಲಿ ಒಪ್ಪಿಸಬೇಕು. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಸರ್ಕಾರದ ಸೂಚನೆಗಳನ್ನು ಗೌರವಿಸಬೇಕು ಹಾಗೂ ಜಾತ್ರೋತ್ಸವವು ಯಶಸ್ವಿಯಾಗುವಲ್ಲಿ ಸಹಕರಿಸಬೇಕೆಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.