ವಿಟ್ಲ: ಅನ್ಯಕೋಮಿನ ಯುವತಿ, ಯುವಕರೊಂದಿಗೆ ಇದ್ದ ಹಿಂದೂ ಯುವತಿಯ ಸಹಿತ ನಾಲ್ವರನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನ.20 ರಂದು ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ನಡೆದಿದ್ದು, ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಅನ್ಯಕೋಮಿನ ಅಪ್ರಾಪ್ತ ಬಾಲಕನ ಸಹಿತ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಅನ್ಯಕೋಮಿನ ಅಪ್ರಾಪ್ತ ಬಾಲಕ ಸಹಿತ ಮಹಮ್ಮದ್ ಶಾಕೀರ್ ಎಂಬಾತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ವಯಸ್ಸಿನ ಮಗಳು ನ.20 ರಂದು ಕಬಕ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಸರಕಾರದ ವತಿಯಿಂದ ನಡೆಸುವ ಕಂಪ್ಯೂಟರ್ ಶಿಕ್ಷಣ ಪಡೆಯಲು ತೆರಳಿದ್ದಳು. ಅಲ್ಲಿಂದ ಆಕೆಯನ್ನು ಮಹಮ್ಮದ್ ಶಾಕೀರ್ ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕ ಪುಸಲಾಯಿಸಿ ಅಪಹರಣ ಮಾಡಿ ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿಗೆ ಯಾವುದೋ ಉದ್ದೇಶದಿಂದ ಕರೆದುಕೊಂಡು ಹೋಗಿದ್ದರು.
ಸಾಯಂಕಾಲ ನನ್ನ ಮಗಳು ಮನೆಗೆ ಕರೆ ಮಾಡಿ ನನ್ನನ್ನು ಅಪಹರಣ ಮಾಡಿ ನಿನ್ನಿಕಲ್ಲು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಳು. ಆಕೆ ನೀಡಿದ ಮಾಹಿತಿಯಂತೆ ನಾನು ನಿನ್ನಿಕಲ್ಲು ಎಂಬಲ್ಲಿನ ಎತ್ತರದ ಗುಡ್ಡ ಪ್ರದೇಶದ ಕಡೆಗೆ ಹೋಗಿ ನೋಡಿದಾಗ ಅಲ್ಲಿ ಇಬ್ಬರು ಹುಡುಗರು ನನ್ನ ಮಗಳೊಂದಿಗೆ ಇರುವುದನ್ನು ಗಮನಿಸಿ ಆಕೆಯನ್ನು ಕರೆದಾಗ ಅಲ್ಲಿದ್ದ ಇಬ್ಬರು ಯುವಕರು ಓಡಿ ಪರಾರಿಯಾಗಿದ್ದಾರೆ ಎಂದು ಯುವತಿಯ ಪೋಷಕರು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


























