ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ನಡುವೆ ದೆಹಲಿಯಲ್ಲಿ ಅತಂಹದೇ ಮತ್ತೊಂದು ಪ್ರಕರಣ ಬಹಿರಂಗವಾಗಿದೆ. ಇದೀಗ ಈ ಪ್ರಕರಣ ಮತ್ತೊಮ್ಮೆ ದೆಹಲಿಯನ್ನು ಬೆಚ್ಚಿಬೀಳಿಸಿದೆ.
ಮಹಿಳೆ ಮತ್ತು ಆಕೆಯ ಮಗ ಸೇರಿ ಆಕೆಯ ಪತಿಯನ್ನು ಕೊಂದು, ದೇಹವನ್ನು ಕತ್ತರಿಸಿ, ರೆಫ್ರಿಜರೇಟರ್‌ನಲ್ಲಿ ಶೇಖರಿಸಿಟ್ಟಿದ್ದು, ಬಳಿಕ ದೇಹದ ಭಾಗಗಳನ್ನು ಪೂರ್ವ ದೆಹಲಿ ನೆರೆಹೊರೆಗಳಲ್ಲಿ ವಿಲೇವಾರಿ ಮಾಡಿರುವ ಆರೋಪದ ಮೇಲೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಪಾಂಡವನಗರದ ಮಹಿಳೆ ಮತ್ತು ಆಕೆಯ ಮಗನನ್ನು ಅಪರಾಧ ವಿಭಾಗ ಬಂಧಿಸಿದೆ. ತಾಯಿ ಮತ್ತು ಮಗ ಜೊತೆ ಸೇರಿ ಪತಿಯನ್ನು ಕೊಂದು ಶವವನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿದ್ದಾರೆ. ಇಬ್ಬರೂ ಬೇರೆ ಬೇರೆ ದಿನಗಳಲ್ಲಿ ಬಂದು ಮಧ್ಯರಾತ್ರಿಯಲ್ಲಿ ಮೃತದೇಹದ ಭಾಗಗಳನ್ನು ಚಾಂದ್ ಚಿತ್ರಮಂದಿರದ ಮುಂಭಾಗದ ಮೈದಾನದಲ್ಲಿ ಎಸೆದಿದ್ದರು.
ತಂದೆಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿತ್ತು ಎಂದು ತನಿಖೆಯ ವರದಿ ತಿಳಿಸಿದೆ. ಅದಕ್ಕಾಗಿಯೇ ಮಗ ತಾಯಿಯೊಂದಿಗೆ ಸೇರಿ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಹೆಸರು ಪೂನಂ ಮತ್ತು ಮಗನ ಹೆಸರು ದೀಪಕ್ ಹಾಗೂ ಮೃತರ ಹೆಸರು ಅಂಜನ್ ದಾಸ್ ಎಂದು ಹೇಳಲಾಗಿದೆ.
ತಾಯಿ ಮತ್ತು ಮಗ ಇಬ್ಬರೂ ಮೃತ ಅಂಜನ್ ದಾಸ್‌ಗೆ ಮೊದಲು ಅಮಲು ಮಾತ್ರೆಗಳನ್ನು ತಿನ್ನಿಸಿ, ನಂತರ ಕೊಂದಿದ್ದಾರೆ. ಕೊಂದ ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮಾಡಿ ಫ್ರಿಡ್ಜ್ ನಲ್ಲಿಟ್ಟಿದ್ದರು. ಯಾರಿಗೂ ಅನುಮಾನ ಬರದಂತೆ ಬೇರೆ ಬೇರೆ ದಿನಗಳಲ್ಲಿ, ಮಧ್ಯರಾತ್ರಿಯಲ್ಲಿ, ಮೃತದೇಹಗಳ ತುಂಡುಗಳನ್ನು ಚಾಂದ್ ಚಿತ್ರಮಂದಿರದ ಮುಂಭಾಗದ ಮೈದಾನದಲ್ಲಿ ಎಸೆದಿದ್ದರು. ದೆಹಲಿ ಪೊಲೀಸರು ಸದ್ಯ ಆರೋಪಿಗಳಾದ ಪೂನಂ ಮತ್ತು ದೀಪಕ್ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
























