ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು,
ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು,
ಮಳೆ ಬಿತ್ತೊ, ‘ಬಿಡದಲ್ಲ ಶನಿ !’ ಎಂಬ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!
ಚಿಗುರ ಚಿನ್ನದ ನಡುವೆ ಹೂವ ಬಯಸುವರು,
ಹೂಗಳ ಕಾಲದಲಿ ಹಣ್ಣ ಹೊಗಳುವರು,
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ !
ನಿಂತರೆ ಕೇಳುವರು, ನೀನೇಕೆ ನಿಂತೆ?
ಮಲಗಿದರೆ ಗೊಣಗುವರು, ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ !
ಓದಿದರೆ ಹೇಳುವರು, ಮತ್ತೊಮ್ಮೆ ಬರೆಯೊ!
ಬರೆದಿಡಲು ಬೆದಕುವರು, ಬರವಣಿಗೆ ಸರಿಯೊ?
ಇವರ ಬಯಕೆಗಳೇನೋ ಇವರದೇ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ !!! ಕೆ ಎಸ್ ನರಸಿಂಹಸ್ವಾಮಿ…
ಆಹಾ! ಈ ಸಾಲುಗಳನ್ನು ಗಮನವಿಟ್ಟು ಓದೋಣ.. ಬಹುಶಃ ಜೀವನ ಅಂದ್ರೆ ಇದೇ ಅಲ್ವಾ?.. ಏನೇ ಮಾಡೋಣ, ಅಲ್ಲೊಂದು ಮಾತು ಇದ್ದೇ ಇರುತ್ತೆ.. ಎಲ್ಲರೂ ಹೊಗಳಿಕೆ ಬಯಸೋದಿಲ್ಲ ಆದರೆ ಪ್ರತಿಯೊಬ್ಬರ ಕಾರ್ಯದಲ್ಲೂ ಏನೋ ಒಂದು ರೀತಿಯ ಕನಸು ಇದ್ದೇ ಇರುತ್ತದೆ.. ಆ ಕನಸು ಬೆಳೆಯಬೇಕೆಂಬ ಆಸೆಯೂ ಇರುತ್ತೆ.. ಆದ್ರೆ ಸಾಮಾಜಿಕವಾಗಿ ನೋಡಿದರೆ ಇಲ್ಲಿ ಟೀಕೆಗಳೇ ಬಲವಾಗಿರುತ್ತದೆ..ಈಗಂತೂ ನೋಡಿದಕ್ಕೊಂದು ಕಮೆಂಟ್ ಮಾಡಿಬಿಡಬೇಕೆನ್ನುವ ಧಾವಂತ.. ಅದರಲ್ಲೂ ನೆಗೆಟಿವ್ ಆಗಿ ಕಮೆಂಟ್ ಮಾಡಿದರೆ ಎಲ್ಲರ ಮುಂದೆ ಹೀರೋಗಳಾಗುತ್ತೇವೆ ಅನ್ನುವ ಭಂಡ ಧೈರ್ಯ ಇರುತ್ತದೋ ಏನೋ? ಅದೂ ಗೊತ್ತಿಲ್ಲ… ಧನಾತ್ಮಕ ಭಾವಕ್ಕಿಂತ ಇರುವ ಪುಟ್ಟ ತಪ್ಪನ್ನೇ ಹಿಡಿದು ಕಮೆಂಟ್ ಮಾಡಿಬಿಡುವ ಕೆಟ್ಟ ಅಭ್ಯಾಸ ಆವರಿಸಿಬಿಟ್ಟಿದೆ…
ತಪ್ಪು ಮನುಷ್ಯ ಮಾಡದೆ ಬೇರಾರು ಮಾಡಲು ಸಾಧ್ಯವಿಲ್ಲ.. ಹಾಗಂತ ಮನುಷ್ಯನ ಉತ್ತಮತೆಯನ್ನು ಎತ್ತಿ ಹಿಡಿದು, ಆದ ತಪ್ಪುಗಳನ್ನು ಮೆಲುದನಿಯಿಂದಲೇ ಹೇಳಿ ಸರಿಪಡಿಸುವ ನೈಪುಣ್ಯತೆ ಇರಬೇಕೇ ಹೊರತು ಅದನ್ನೇ ಹೇಳಿ ಹೇಳಿ, ಅದಕ್ಕೊಂದಷ್ಟು ತಾನೇ ಮೇಧಾವಿ ಅನ್ನುತ್ತಾ ಟೀಕೆ ಮಾಡಿದರೇನು ಫಲ? ಇದು ಅಕ್ಷರಸ್ಥರ ಕಾಲ.. ಧಮ್ಕಿ ಹಾಕಿದಾಕ್ಷಣ ಅದನ್ನೇ ಕೇಳಿಕೊಂಡು ಮರುಮಾತಾಡದೆ ಕೈ ಕಟ್ಟಿ ಕೂರುವವರಂತೂ ಯಾರೂ ಇಲ್ಲಿಲ್ಲ.. ಪ್ರತಿಯೊಬ್ಬರಿಗೂ ಆತ್ಮಾಭಿಮಾನ-ಆತ್ಮಗೌರವ ಮುಖ್ಯವಾಗುತ್ತದೆ.. ಹಾ…. ಕಮೆಂಟ್ ಮಾಡೋರಿಗೂ ಕೂಡಾ ಒಮ್ಮೆಗೆ ಕಮೆಂಟ್ ಮಾಡಿಬಿಡೋದು ಸುಲಭ.. ಆದರೆ ಅಂತಹದೇ ವಿಚಾರ, ಅಂತಹದೇ ಸಂದರ್ಭ ತಮ್ಮ ಬುಡಕ್ಕೆ ಬಂದಾಗಲಷ್ಟೇ ಆ ಕಮೆಂಟ್ ಹಿಂದಿನ ಸತ್ಯ, ನೋವುಗಳು ಏನು ಎಂಬುದು ಅರ್ಥವಾಗುವಂಥದ್ಧು..
ಈಗಂತೂ ಬಹಳಷ್ಟು ಜನರು ಸೋಶಿಯಲ್ ಮೀಡಿಯಾ ಮೂಲಕ ಯಾರದ್ದೋ ಬದುಕನ್ನು ನಾಶ ಮಾಡೋಕೂ ಹೇಸುವವರಿಲ್ಲ.. ಆದರೆ ಸೋಶಿಯಲ್ ಮೀಡಿಯಾ ಉತ್ತಮತೆಯನ್ನು ಬಿತ್ತರಿಸುವ ಮಾಧ್ಯಮವಾಗಬೇಕೇ ಹೊರತು ಯಾರದ್ದೋ ಬದುಕಿನ ಸಂತಸವನ್ನು ಕಿತ್ತುಕೊಳ್ಳುವಂತಾಗಬಾರದು.. ಅರೆ! ಈ ಮಾತು ಯಾಕೆ ಅನ್ನೋ ಪ್ರಶ್ನೆ ಬಂದ್ರೆ ಸಹಜಾನೇ ಬಿಡಿ.. ಯಾಕಂದ್ರೆ ಈಗ ಟ್ರೆಂಡ್ ಇಲ್ಲೇ ಇರೋದು.. ವ್ಯಕ್ತಿ ತನ್ನ ಸಂತಸ, ತನ್ನ ಕಾರ್ಯ, ತನ್ನ ಸಾಧನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿತ್ತರಿಸುತ್ತಾನೆ.. ಆದರೆ ಕೆಲಸವಿಲ್ಲದವರೋ ಅಥವಾ ಕೆಲಸವಿದ್ದೂ ಯಾರದ್ದಾದರೂ ಕಾಲೆಳೆಯಬೇಕು ಅನ್ನೋ ಮನಸಿರೋರೋ ಎಷ್ಟೇ ಚೆನ್ನಾಗಿದ್ದರೂ ಅಲ್ಲಿ ತಪ್ಪು ಹುಡುಕಿಯೇ ಸಿದ್ದ ಅನ್ನೋ ಧೋರಣೆ… ಅವರಾಸೆಯಂತೆ ತಪ್ಪೇನೋ ಹುಡುಕಿ, ಅದನ್ನ ಪಬ್ಲಿಕ್ ಆಗಿ ಬರೆದು ಹಾಕಿ, ಆ ಮೂಲಕ ತಾನೇನೋ ಮೇಧಾವಿ ಆಗೋಕೆ ಹೊರಡ್ತಾರೆ.. ಇನ್ನೊಬ್ಬರಿಗೆ ಸಂಸ್ಕೃತಿ ಪಾಠ ಮಾಡೋದು ಅಂತಾರೆ.. ಆದರೆ ಈ ರೀತಿ ಅಸಂಬದ್ಧವಾಗಿ ಇನ್ನೊಬ್ಬರ ಕಾರ್ಯವನ್ನು ಟೀಕಿಸುವ ಅಧಿಕಾರ ನಮ್ಮ ಸುಸಂಸ್ಕೃತ ಸಮಾಜ ಕೊಟ್ಟಿಲ್ಲ ಅನ್ನೋದು ಅವರಿಗೂ ಗೊತ್ತಿಲ್ಲ🤗😊..
ಇನ್ನೊಬ್ಬರ ಬಟ್ಟೆ, ಇನ್ನೊಬ್ಬರ ಮಾತು, ಇನ್ನೊಬ್ಬರ ನಗು ನೋಡಿ ಇನ್ನೇನೋ ಹೇಳೋದು, ಯಾರೋ ಸೈಲೆಂಟ್ ಇರ್ತಾರೆ ಅಂದ ಕೂಡಲೇ ಅವರಿಗೆ ಅಹಂ ಅನ್ನೋದು, ಯಾರೋ ಜೀವನದಲ್ಲಿ ತನ್ನ ಪಾಡಿಗೆ ಇರಬೇಕು ಅನ್ಕೊಳ್ಳೋರಿಗೆ ‘ಹಿಂದಿದ್ದಂತೆ ಈಗ ಇಲ್ಲ- ತಲೆಯಲ್ಲಿ ಬೇಜಾನ್ ತುಂಬ್ಕೊಂಡಿದೆ’ ಅನ್ನೋದು, ಎಲ್ಲಿಗಾದರೂ ಹೋದರೆ ಅಲ್ಲೂ ಕಮೆಂಟ್, ದಪ್ಪ ಇದ್ದರೆ “ಡುಮ್ಮಿ”, ತೆಳ್ಳಗಿದ್ದರೆ “ಇವಳಿಗೇನು ಊಟ ಹಾಕಲ್ವಾ” ಹೀಗೆ ಒಂದಷ್ಟು ಶಾರೀರಿಕ ಅಭಿಪ್ರಾಯ, ಯಾರನ್ನೋ ಹೋಗಿ “ಅವಳು ಹೇಗೆ” ಅಂತ ಪ್ರಶ್ನಿಸಿದಾಗ “ಹೋ ಅವಳಾ? ಅಹಂಕಾರಿ, ಸರಿ ಇಲ್ಲ” ಅನ್ನೋದು.ಇನ್ನೂ ಒಂದು “ಅವಳನ್ನು ಸಾಕೋದೇ ಕಷ್ಟ ಮಾರ್ರೆ” ಅಂದು ಬಿಡೋದು.. ಹೀಗೆ ಪಟ್ಟಿ ಮಾಡಿದ್ರೆ ಇಲ್ಲಿ ಯಾವುದಕ್ಕೆ ಕಮೆಂಟ್ ಇಲ್ಲ ಹೇಳಿ..ಕೊರತೆಗಳ ಸಾಲು ಎದ್ದು ಕಾಣುತ್ತದೆ…
ಹಾಗ್ ನೋಡೋಕ್ ಹೋದರೆ ಪರ್ಫೆಕ್ಟ್ ಆಗಿರಬೇಕು ಅಂತ ಎಷ್ಟೇ ಅಂನ್ಕೊಂಡ್ರೂ ತಪ್ಪುಗಳು ಆಗೇ ಆಗುತ್ತೇ. ನಾನು ತಪ್ಪೇ ಮಾಡಿಲ್ಲ ಅಂದ್ರೆ ಏನನ್ನೂ ಕಲಿಯುವುದು ಇಲ್ಲ.. ಈ ಥರ ಇದ್ರೆ ಜೀವನದ ಅನುಭವವೂ ಇಲ್ಲ.. ಇನ್ನೊಬ್ಬರ ಖರ್ಚು, ಇನ್ನೊಬ್ಬರ ಫ್ಯಾಶನ್, ಇನ್ನೊಬ್ಬರ ವ್ಯಕ್ತಿತ್ವ ಅಳತೆ ಮಾಡುವ ಅಧಿಕಾರ ಇಲ್ಲ.. ನಾವೇನೂ ಅನ್ನೋದನ್ನ ನೋಡ್ಕೊಂಡ್ರೆ ನಮ್ಮ ತಪ್ಪುಗಳನ್ನು ತಿದ್ಕೊಬೋದು.. ಅದು ಬಿಟ್ಟು ಇನ್ನೊಬ್ಬರು ಅವಳನ್ನು ಸಾಕೋದ್ ಕಷ್ಟ ಅನ್ನೋಕೆ ಸಾಕೋರು ಅವಳ ಮನೆಯವರಾಗಿರ್ತಾರೆಯೇ ಹೊರತು ಹೊರಗಿನವರಲ್ಲ.. ಅವಳು ಅಥವಾ ಅವನು ದುಡಿದದ್ದರಲ್ಲಿ ಬದುಕು ಸಾಗಿಸುತ್ತಾರೆಯೇ ಹೊರತು ಹೊರಗಿನಿಂದಲ್ಲ.. ಸಾಧ್ಯವಾದರೆ ಇನ್ನೊಬ್ಬರಿಗೆ ಖುಷಿ ನೀಡುವವರಾಗಬೇಕು, ಬದಲಾಗಬೇಕಾಗಿರುವುದು ಇಂತಹ ವಿಚಾರಗಳಲ್ಲೇ.. ಎಷ್ಟೇ ವಿದ್ಯಾವಂತರಾದರೂ ಇವತ್ತಿಗೂ ಇನ್ನೊಬ್ಬರ ಬಗ್ಗೆ ಕಮೆಂಟ್ ಪಾಸಿಂಗ್, ಕಾಲ್ ಮಾಡಿ ‘ಲೇ ಅವನು ಹಾಗಂತೆ, ಇವಳ ಕಥೆ ಹೀಗಂತೆ’ ಅಂತೆಲ್ಲಾ ಅಂದು ಹುಳಿ ಹಿಂಡುವ ಕೆಲಸಕ್ಕೆ ಪೂರ್ಣವಿರಾಮ ಬಿದ್ದಿಲ್ಲ.. ಈ ಅಂತೆ ಕಂತೆಗಳ ನಡುವೆ ಜೀವನ ಪೂರ್ತಿ ಕಳೆದೇ ಹೋಗುತ್ತೆ..
ಜೀವನ ಯಾನ ಸಿಹಿಕಹಿಗಳ ಮಿಶ್ರಣ.. ಪ್ರತಿ ಹೆಜ್ಜೆಯಲ್ಲೂ ನೆಗೆಟಿವ್ ಪಾಸಿಟಿವ್ ವಿಚಾರಗಳ ಸಮ್ಮಿಲನ.. ಹಾಗಂತ ನೆಗೆಟಿವಿಟಿ ಬದಲಾಗೋಕೆ ಸಾಧ್ಯ ಇಲ್ಲ ಅನ್ಕೊಂಡ್ರೆ ತಪ್ಪು ಕಲ್ಪನೆ.. ಪ್ರತಿಯೊಬ್ಬರೂ ಇನ್ನೊಬ್ಬರ ಬಗ್ಗೆ ಟೀಕಿಸುವ ಬದಲಾಗಿ ತನ್ನತನವನ್ನು ನೋಡಿಕೊಂಡಾಗ ಸರ್ವರೂ ಸರ್ವವೂ ಬದಲಾಗಲೇಬೇಕಲ್ಲ… ಇಷ್ಟು ಪೀಟಿಕೆಗಿಂತ ಕೆ ಎಸ್ ನರಸಿಂಹಸ್ವಾಮಿಯವರ ಕವನ ಅರ್ಥವಾಗುವವರಿಗೆ ಸಾಕೆನಿಸುತ್ತೆ.. ಯಾರೂ ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.. ಹಾಗಂತ ಟೀಕೆಗಳಿಗೆ ಕಿವಿಗೊಡದೆ ಮುಂದೆ ಸಾಗಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ.ಯಾರೆಷ್ಟೇ ಗೋಗರೆದರೂ, ಕವನ, ಲೇಖನ ಬರೆದರೂ ಟೀಕೆ ನಿಲ್ಲೋದಿಲ್ಲ, ಹಾಗಾಗಿ ಸಾಧಿಸುವ ಮೂಲಕ ಟೀಕೆಗೆ ವಿದಾಯ ಹೇಳೋಕೆ ಸಾಧ್ಯವಿದೆ………
🖋️🖋️ಪ್ರಜ್ಞಾ ಓಡಿಲ್ನಾಳ