ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಪ್ರಭಾವಿ ಮುಖಂಡರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ರನ್ನು ಬೆಂಗಳೂರು ನಗರ ಉತ್ತರ ಜಿಲ್ಲೆಯ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಯನ್ನಾಗಿ ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂತಹ ಮಹತ್ತರವಾದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಇವರು ಭಾರತ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಕರ್ತವ್ಯ ನಿರ್ವಹಿಸಿದವರು. ಕಳೆದ 6 ವರ್ಷಗಳಿಂದ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರದಲ್ಲಿ ರಾಮ ಲಕ್ಷ್ಮಣ ಹೆಸರಿನ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ.
ಲಿಟ್ ಫೆಸ್ಟ್ ಎಂಬ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಸಂಘಟನಾ ಕಾರ್ಯವನ್ನು ಮೆಚ್ಚಿ ಪಕ್ಷದ ಚುನಾವಣಾ ಸಮಯದಲ್ಲಿ ಪಕ್ಷದ ವರಿಷ್ಠರು ಮಹತ್ವದ ಜವಾಬ್ದಾರಿಯನ್ನು ನೀಡಿದ್ದು, ಮಲ್ಲೇಶ್ವರ ಕ್ಷೇತ್ರದ ಪ್ರಭಾರಿಯಾಗಿ ನೇಮಿಸಲಾಗಿದೆ. ಈ ಕ್ಷೇತ್ರವು ಮಾಜಿ ಉಪಮುಖ್ಯಮಂತ್ರಿ ಹಾಲಿ ಸಚಿವ ಡಾ.ಅಶ್ವತನಾರಾಯಣ್ ಅವರಿಗೆ ಸೇರಿದ್ದು, ಅವರು ರಾಜ್ಯವ್ಯಾಪ್ತಿ ಚುನಾವಣಾ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಮಲ್ಲೇಶ್ವರ ಕ್ಷೇತ್ರವನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾದ ಮಹತ್ವದ ಹೊಣೆಗಾರಿಕೆ ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೇಲಿದೆ. ಇವರ ನೇಮಕಕ್ಕೆ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.