ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ಶೋವೊಂದು ಕೊರಗಜ್ಜನ ಕೋಲದ ಕಾರಣಕ್ಕೆ ರದ್ದಾಗಿದೆ.
ನಾಳೆ ಮಂಗಳೂರಿನಲ್ಲಿ ಅಮಿತ್ ಶಾ ನಡೆಸಬೇಕಿದ್ದ ರೋಡ್ ಶೋ ಅನ್ನು ರದ್ದುಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದು ತಿಳಿದು ಬಂದಿದೆ.
ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಅಮಿತ್ ಶಾ ನಾಳೆ ಬರಲಿದ್ದು, ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುವುದು ಬಿಜೆಪಿ ಯೋಜನೆ. ಪುತ್ತೂರಿನ ಕ್ಯಾಂಪ್ಕೋ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬಳಿಕ ಅಮಿತ್ ಶಾ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸುವುದಿತ್ತು. ರೋಡ್ ಶೋ ನಡೆಯುವ ಮಾರ್ಗಮಧ್ಯೆ ಪದವಿನಂಗಡಿ ಬಳಿ ಕೊರಗಜ್ಜನ ಕೋಲ ನಡೆಯುತ್ತಿದೆ. ಈ ಕಾರಣಕ್ಕೆ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.
ಅಮಿತ್ ಶಾ ಭೇಟಿ ವಿವರ
ಶನಿವಾರ ಮಧ್ಯಾಹ್ನ 2:15ಕ್ಕೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರಮಂಗಲಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2:50ಕ್ಕೆ ಈಶ್ವರಮಂಗಲ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಬಿಜೆಪಿ ಚಾಣಕ್ಯ ಬಳಿಕ ಹೆಲಿಕಾಪ್ಟರ್ ಮೂಲಕ ಪುತ್ತೂರಿಗೆ ಬಂದಿಳಿಯಲಿದ್ದಾರೆ. ಇಲ್ಲಿ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿರುವ ಅಮಿತ್ ಶಾ ಸಂಜೆ ಆರು ಗಂಟೆ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಲಿದ್ದಾರೆ. ಸಂಜೆ ಆರು ಹದಿನೈದರಿಂದ ರಾತ್ರಿ ಎಂಟು ಗಂಟೆಯವರೆಗೂ ಮಂಗಳೂರು ಏರ್ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಅಮಿತ್ ಶಾ ಆಂತರಿಕ ಸಭೆ ನಡೆಸಲಿದ್ದಾರೆ. ಈ ಸಭೆ ಮುಕ್ತಾಯಗೊಂಡ ಬಳಿಕ ಅಮಿತ್ ಶಾ ದೆಹಲಿಗೆ ಮರಳಲಿದ್ದಾರೆ.