ಮಂಗಳೂರು: ಮನೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಆಕಾಶಭವನದ ಕಾಪಿಗುಡ್ಡೆ ನಿವಾಸಿ ಶ್ರೀಮತಿ ಭವಾನಿ ಅವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.
ಭೇಟಿಯ ವೇಳೆ ಭವಾನಿ ಅವರ ಸಮಸ್ಯೆಗಳು ಹಾಗೂ ಸಂಕಷ್ಟಗಳನ್ನು ಆಲಿಸಿದ ಇನಾಯತ್ ಅಲಿ, ಮನೆ ಕುಸಿತದಿಂದ ಕುಟುಂಬ ಎದುರಿಸುತ್ತಿರುವ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮನೆ ಕಳೆದುಕೊಳ್ಳುವುದು ಕೇವಲ ಕಟ್ಟಡದ ನಷ್ಟವಲ್ಲ, ಕುಟುಂಬದ ಭದ್ರತೆ, ನೆಮ್ಮದಿ ಮತ್ತು ಭವಿಷ್ಯದ ಕನಸುಗಳಿಗೆ ದೊಡ್ಡ ಹೊಡೆತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇನಾಯತ್ ಅಲಿ ಅವರು ವೈಯಕ್ತಿಕವಾಗಿ ₹50 ಸಾವಿರ ಧನಸಹಾಯ ನೀಡಿದರು. ಜೊತೆಗೆ, ಸಂಬಂಧಿತ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕುಟುಂಬಕ್ಕೆ ಅಗತ್ಯ ಸರ್ಕಾರಿ ನೆರವು ಹಾಗೂ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸುವಂತೆ ಮನವಿ ಮಾಡಿದರು.
ಕುಟುಂಬದೊಂದಿಗೆ ಸದಾ ನಿಲ್ಲುವುದಾಗಿ ಭರವಸೆ ನೀಡಿದ ಅವರು, ಸಂಕಷ್ಟದ ಈ ಸಂದರ್ಭದಲ್ಲಿ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ತಿಳಿಸಿದರು.


























