ಮಂಗಳೂರು: ನಗರ ಪೊಲೀಸ್ ಇಲಾಖೆ ವತಿಯಿಂದ ಕೊಟೆಕಾರ ಬೀರಿ ಹಾಗೂ ಕೋಣಾಜೆಯ ಬಂಟ್ಸ್ ಭವನದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತು (ಡ್ರಗ್ಸ್) ಪರೀಕ್ಷೆ ನಡೆಸಲಾಯಿತು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಹಾಗೂ ಕೇಂದ್ರ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆಯಿತು. ಖಾಸಗಿ ಹಾಗೂ ಕಾಲೇಜು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್‌ಗಳ ಮೂಲಕ ಪರೀಕ್ಷೆ ನಡೆಸಲಾಯಿತು.
ಒಟ್ಟು 159 ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಯಿತು. ಇವರಲ್ಲಿ 158 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಯ ವರದಿ ಪಾಸಿಟಿವ್ ಬಂದಿದೆ.
ಸಂಜೆ 4.30ರಿಂದ 6.00 ಗಂಟೆಯವರೆಗೆ ಈ ಡ್ರಗ್ಸ್ ಪರೀಕ್ಷಾ ಕಾರ್ಯಾಚರಣೆ ನಡೆಯಿತು.
ಈ ಕುರಿತು ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪಾಸಿಟಿವ್ ಬಂದಿರುವುದು ಉತ್ತೇಜನಕಾರಿ ಬೆಳವಣಿಗೆಯಾಗಿದೆ. ಡ್ರಗ್ಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗುವ ವಿದ್ಯಾರ್ಥಿಗಳ ಪ್ರಮಾಣ ಕಡಿಮೆಯಾಗುತ್ತಿರುವುದು ಕಂಡುಬಂದಿದ್ದರೂ, ಇನ್ನೂ ಸಾಕಷ್ಟು ಜಾಗೃತಿ ಹಾಗೂ ನಿರಂತರ ಕ್ರಮಗಳ ಅಗತ್ಯವಿದೆ ಎಂದು ತಿಳಿಸಿದೆ.
ಡ್ರಗ್ಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿಯನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಕೌನ್ಸೆಲಿಂಗ್‌ಗೆ ಕಳುಹಿಸಲಾಗುವುದು. ಅಲ್ಲದೆ, ಮುಂದಿನ ದಿನಗಳಲ್ಲಿಯೂ ನಿರಂತರ ಮೇಲ್ವಿಚಾರಣೆ ಹಾಗೂ ಅನುಸರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



























