ಮಂಗಳೂರು: ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸರು ಬುಧವಾರ ಸುಮಾರು ₹82 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ನಾಶಪಡಿಸಿದರು.
ಮಂಗಳೂರು ನಗರದ ಮುಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ Ramky Energy and Environment Ltd. (Re Sustainability Healthcare Solutions Ltd.) ಸಂಸ್ಥೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು, ಡ್ರಗ್ ಡಿಸ್ಪೋಸಲ್ ಕಮಿಟಿ ಸಮಕ್ಷಮ ಈ ಕಾರ್ಯಾಚರಣೆ ನಡೆಸಲಾಯಿತು.
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 16 ಪೊಲೀಸ್ ಠಾಣೆಗಳ 59 ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ 450 ಕೆಜಿ ಗಾಂಜಾ, 43 ಕೆಜಿ 260 ಗ್ರಾಂ ಎಂಡಿಎಂಎ, 80 ಗ್ರಾಂ ಚರಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ 1 ಕೆಜಿ 200 ಗ್ರಾಂ ಭಾಂಗ್ ಅನ್ನು ಸುಟ್ಟು ನಾಶಪಡಿಸಲಾಯಿತು.
ನಾಶಪಡಿಸಿದ ಮಾದಕ ವಸ್ತುಗಳಲ್ಲಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸುಮಾರು ₹75 ಕೋಟಿ ಮೌಲ್ಯದ 37 ಕೆಜಿ ಎಂಡಿಎಂಎ, 2025ರಲ್ಲಿ ಮುಲ್ಕಿ ಪೊಲೀಸ್ ಠಾಣೆಯ ₹4.47 ಕೋಟಿ ಮೌಲ್ಯದ ಸುಮಾರು 4 ಕೆಜಿ ಎಂಡಿಎಂಎ, ಕೊಣಾಜೆ ಪೊಲೀಸ್ ಠಾಣೆಯ 106 ಕೆಜಿ ಗಾಂಜಾ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯ 111 ಕೆಜಿ ಗಾಂಜಾ ಪ್ರಮುಖವಾಗಿವೆ.
ಇದೇ ವೇಳೆ 2026ನೇ ಸಾಲಿನಲ್ಲಿ ಇದುವರೆಗೆ ನಗರ ಪೊಲೀಸ್ ವ್ಯಾಪ್ತಿಯಲ್ಲಿ 87 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ 157 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಗಳಲ್ಲಿ 148 ಕೆಜಿ 615 ಗ್ರಾಂ ಗಾಂಜಾ, 7 ಕೆಜಿ 165 ಗ್ರಾಂ ಎಂಡಿಎಂಎ, 1 ಕೆಜಿ 705 ಗ್ರಾಂ ಹೈಡ್ರೋ ವೀಡ್ ಸೇರಿದಂತೆ ₹8.18 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳು ದಾಖಲಾಗಿವೆ.
ಮಾದಕ ವಸ್ತುಗಳ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಯ ಕ್ಯೂಆರ್ ಕೋಡ್ ಅಥವಾ 112 ಹಾಗೂ 9480802321 ಸಂಖ್ಯೆಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



























