ಪುತ್ತೂರು: ಸುಳ್ಯ ತಾಲೂಕಿನ ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ ಮಹಿಳೆಯೋರ್ವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರಿನಲ್ಲಿ ವಂಚನೆ ಮಾಡಿದ್ದ ಘಟನೆ ನಡೆದಿದ್ದು. ಮಹಿಳೆ ಕಳೆದುಕೊಂಡ ಮೊತ್ತವನ್ನು ಪಾವತಿಸಿ ಪುತ್ತೂರು ಶಾಸಕರು ಮಾನವೀಯತೆ ಮೆರೆದಿದ್ದಾರೆ.
ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ ಗಣೇಶ್‌ರವರ ಪತ್ನಿ ಪುಷ್ಪಾವತಿ ಹಣ ಕಳೆದುಕೊಂಡ ಗೃಹಿಣಿ. ಪುಷ್ಪಾವತಿಯವರ ಗಂಡ ಗಣೇಶ್ ಕ್ಯಾನರ್ ಪೀಡಿತರಾಗಿದ್ದು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಕಷ್ಟವನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೂ ಭಿತ್ತರವಾಗಿತ್ತು. ಈ ಸುದ್ದಿಯನ್ನು ಗಮನಿಸಿದ್ದ ದಾನಿಗಳು ಪುಷ್ಪಾವತಿಯವರ ಖಾತೆಗೆ ಹಣ ಕಳುಹಿಸಿದ್ದರು. ಒಟ್ಟು22,500 ಹಣ ಜಮೆಯಾಗಿತ್ತು. ಜು.27 ರಂದು ಸಂಜೆ ವೇಳೆ ಅನಾಮಿಕ ಕರೆಯೊಂದು ಬಂದಿದೆ. ಕರೆಯನ್ನು ಸ್ವೀಕರಿಸಿದ ಪುಷ್ಪಾವತಿಯವರಲ್ಲಿ ನಿಮಗೆ ಪುತ್ತೂರು ಶಾಸಕ ಅಶೋಕ್ ರೈ ಅವರು 3 ಲಕ್ಷ ಹಣ ನೀಡುವುದಾಗಿ ಹೇಳಿದ್ದಾರೆ ಹಣ ಕಳುಹಿಸಬೇಕಾದರೆ ನೀವು 25 ಸಾವಿರ ರೂ ಟ್ಯಾಕ್ಸ್ ಮೊತ್ತವನ್ನು ಪಾವತಿ ಮಾಡಬೇಕು ಎಂದು ಹೇಳಿದ್ದ.ಇದನ್ನು ನಂಬಿದ ಮಹಿಳೆ ಖಾತೆಯಲ್ಲಿದ್ದ 22,500 ರೂವನ್ನು ಕರೆ ಮಾಡಿದ್ದ ವ್ಯಕ್ತಿಗೆ ಫೋನ್ ಪೇ ಮಾಡಿದ್ದಾರೆ .ಇದಾದ ಬಳಿಕ ಕರೆ ಮಾಡಿದಾಗ ಆ ನಂಬರ್ ಸ್ವಿಚಾಫ್ ಆಗಿತ್ತು. ಈ ಬಗ್ಗೆ ಪುಷ್ಪಾವತಿಯವರು ಸುಳ್ಯ ನಗರಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ವಿಷಯ ತಿಳಿದು ದು:ಖಿತರಾದ ಪುತ್ತೂರು ಶಾಸಕ ಆಶೋಕ್ ರೈ : ತನ್ನ ಹೆಸರು ಹೇಳಿ ಮಹಿಳೆಗೆ ವಂಚನೆ ಮಾಡಿದ ವಿಷಯ ತಿಳಿದು ಶಾಸಕರು ದುಖಿತರಾದರು. ಓರ್ವ ರೋಗಿಯ ಖಾತೆಗೆ ಬಂದ ಹಣವನ್ನು ಈ ರೀತಿಯಾಗಿ ಸುಳ್ಳು ಹೇಳಿ ವಂಚನೆ ಮಾಡಿದ್ದು ದೇವರು ಮೆಚ್ಚದ ಕೆಲಸವಾಗಿದೆ ಎಂದು ಹೇಳಿ ವರದಿ ಮಾಡಿದ್ದ ಪತ್ರಕರ್ತಗೆ ಕರೆ ಮಾಡಿ ನನ್ನ ಹೆಸರು ಹೇಳಿದ ಕಾರಣ, ನನ್ನ ಮೇಲಿನ ಗೌರವದಿಂದ ಮಹಿಳೆ ಹಣ ಕಳಿಸಿದ್ದಾರೆ, ಮಹಿಳೆ ಕಳೆದುಕೊಂಡ ಮೊತ್ತವನ್ನು ನಾನು ನೀಡುವುದಾಗಿ ತಿಳಿಸಿದ್ದರು. ಬಳಿಕ ಶಾಸಕರು ಮಹಿಳೆ ಕಳೆದು ಕೊಂಡ ಮೊತ್ತ 22,500 ಕ್ಕೆ ಹೆಚ್ಚುವರಿಯಾಗಿ 7,500 ನೀಡಿ ಒಟ್ಟು 30 ಸಾವಿರ ರೂ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ ಮಹಿಳೆಗೆ ಸಾಂತ್ವನ ಹೇಳಿದ್ದಾರೆ.



























