ಮಂಗಳೂರು:ನಗರದ ಪದವು ಗ್ರಾಮದ ಜೋಡುಕಟ್ಟೆ–ಮರೋಳಿ ಸಮೀಪ ಅಕ್ರಮವಾಗಿ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿಯ ಶಶಾಂಕ ಪುದುವೆಟ್ಟು, ಮಂಜೇಶ್ವರದ ಅಬ್ದುಲ್ ಖಾದರ್ ಹಾಗೂ ಅತ್ತಾವರದ ಪ್ರಭಾಚಂದ್ರ ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಗಳಿಂದ ಎರಡು ಕಾರುಗಳು ಹಾಗೂ 42.700 ಕೆ.ಜಿ. ತೂಕದ ಎರಡು ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಆನೆದಂತಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜೂರು (ಐಪಿಎಸ್) ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ.ಆರ್ ಹಾಗೂ ಸಿಬ್ಬಂದಿಗಳಾದ ಜಯರಾಮ ಕೆ.ಟಿ., ಬಾಲಕೃಷ್ಣ ಕೆ.ಎಂ., ತಾರಾನಾಥ ಎಸ್. ಮತ್ತು ಅಬ್ದುಲ್ ರವೂಫ್ ಭಾಗವಹಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


























