ಉಪ್ಪಿನಂಗಡಿ: ಬಾಕಿ ಉಳಿದಿದ್ದ ಮೊಬೈಲ್ ಇಎಂಐ ಹಣ ಕೇಳಲು ಮನೆಗೆ ತೆರಳಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಅ.30ರಂದು ನಡೆದಿದೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ಕೊಡಿಪ್ಪಾಡಿ ಮನೆ ನಿವಾಸಿ ಆದಿತ್ಯ ಜಿ. (22) ನೀಡಿದ ದೂರಿನಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಿತ್ಯ ಮತ್ತು ಅವರ ಸಹೋದ್ಯೋಗಿ ಸುರಕ್ಷ್ ಅವರು ಪುತ್ತೂರಿನ ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬೆದ್ರೋಡಿಯ ಹನ್ನತ್ ಬೀಬಿ ಅವರು ಕಂಪನಿಯ ಮೂಲಕ ಇಎಂಐನಲ್ಲಿ ಮೊಬೈಲ್ ಖರೀದಿಸಿದ್ದರು. ಆದರೆ, ಇಎಂಐ ಹಣ ಬಾಕಿ ಉಳಿದಿತ್ತು ಎನ್ನಲಾಗಿದೆ.
ಅ.30ರಂದು ಹನ್ನತ್ ಬೀಬಿ ಅವರು ಫೋನ್ ಮಾಡಿ ಮನೆಗೆ ಬಂದರೆ ಹಣ ನೀಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಆದಿತ್ಯ ಮತ್ತು ಸುರಕ್ಷ್ ಮನೆಗೆ ತೆರಳಿ ಹಣ ಕೇಳಿದ್ದರು. ಈ ವೇಳೆ ಹನ್ನತ್ ಬೀಬಿ ಅವರ ಸಹೋದರ ಶಮೀರ್ ಏಕಾಏಕಿ ಸುರಕ್ಷ್ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ಕೈಯಿಂದ ಕೆನ್ನೆಗೆ ಹೊಡೆದು, ಅಲ್ಲೇ ಇದ್ದ ಕುರ್ಚಿಯಿಂದ ಕೈಗೆ ಹೊಡೆದಿದ್ದಲ್ಲದೆ, ಕಾರಿನ ಟಯರ್ ಎಸೆದಿದ್ದಾನೆ ಎನ್ನಲಾಗಿದೆ. ಇದರಿಂದ ಸುರಕ್ಷ್ ಅವರ ಬಲಕಾಲು, ಕೈ ಹಾಗೂ ಕೆನ್ನೆಗೆ ಗಾಯಗಳಾಗಿವೆ.
ಗಲಾಟೆಯನ್ನು ಮನೆಯವರು ಸೇರಿ ಬಿಡಿಸಿದ್ದು, ಗಾಯಗೊಂಡ ಸುರಕ್ಷ್ ಅವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 145/2026ರಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
























