ಪುತ್ತೂರು: ಕೊಡಿಂಬಾಡಿ ಗ್ರಾಮದ ಶಾಂತಿನಗರದಲ್ಲಿ ಬೆಂಗಳೂರಿನ ಫೌಂಡೇಶನ್ ಒಂದರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದು ಫೌಂಡೇಶನ್ ಹೆಸರಿನಲ್ಲಿ ದೇಣಿಗೆ ಕೇಳಿದ್ದಲ್ಲದೆ, ಮಕ್ಕಳನ್ನು ಕೊಡಿಸುವುದಾಗಿ ಹೇಳಿ ಹಣ ಸಂಗ್ರಹಿಸಲು ಮುಂದಾಗಿದ್ದ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ 112 ತುರ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಆತ ಹಾಸನ ಜಿಲ್ಲೆಯ ಬೇಲೂರು ನಿವಾಸಿ ಗಣೇಶ್ (24) ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ದೂರುದಾರರು ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಗಣೇಶ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ 1965ರ ಕಲಂ 92ರಡಿ ಪ್ರಕರಣ ದಾಖಲಿಸಲಾಗಿದೆ.


























