ಮಂಗಳೂರು: ಪುತ್ತೂರಿನ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ರಾಜಿ ಸಂಧಾನದ ಸಾಧ್ಯತೆ ಮೂಡಿದೆ. ಈ ಸಂಬಂಧ ಆರೋಪಿಯ ಪರ ವಕೀಲರು ಹೈಕೋರ್ಟ್‌ನಲ್ಲಿ ರಾಜಿ ಸಂಧಾನಕ್ಕೆ ಸಿದ್ಧತೆ ವ್ಯಕ್ತಪಡಿಸಿದ್ದು, ಜೂನ್ 19ರಂದು ನಡೆಯಲಿರುವ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಪ್ರಕರಣ ಸುಖಾಂತ್ಯ ಕಾಣುವ ವಿಶ್ವಾಸವಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.
ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಆರೋಪಿಯ ಪರ ವಕೀಲ ಪಿ.ಪಿ. ಹೆಗ್ಡೆ ಅವರು ಪ್ರಕರಣವನ್ನು ಪರಸ್ಪರ ಒಪ್ಪಂದದ ಮೂಲಕ ಇತ್ಯರ್ಥಪಡಿಸಲು ಸಿದ್ಧವಿರುವುದಾಗಿ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಸಂತ್ರಸ್ತೆ ಹಾಗೂ ಆರೋಪಿಯ ಕುಟುಂಬದವರು ಜೂನ್ 19ರಂದು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ನಿಗದಿಪಡಿಸಿದೆ.
ಇದರ ಜೊತೆಗೆ, ಸಂತ್ರಸ್ತೆ ಮತ್ತು ಮಗುವಿನ ಆರೈಕೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಠೇವಣಿ ಇಡಲಾಗಿದ್ದ ₹75,000 ಮೊತ್ತವನ್ನು ಸಂತ್ರಸ್ತೆಗೆ ಬಿಡುಗಡೆ ಮಾಡಬೇಕು ಹಾಗೂ ಎರಡನೇ ಕಂತಿನ ಹಣವನ್ನು ನಾಲ್ಕು ದಿನಗಳೊಳಗೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳು ಮಾನಸಿಕ ಹಾಗೂ ಸಾಮಾಜಿಕ ತೊಂದರೆ ಅನುಭವಿಸಿದ್ದು, ರಾಜಿ ಸಂಧಾನದ ಮೂಲಕ ಸಂತ್ರಸ್ತೆಗೆ ಕುಟುಂಬದ ಭದ್ರತೆ ದೊರೆಯುವ ನಿರೀಕ್ಷೆ ಇದೆ ಎಂದು ನಂಜುಂಡಿ ಹೇಳಿದರು. ಈ ಕಾರಣದಿಂದ ಜೂನ್ 17ರಂದು ನಿಗದಿಯಾಗಿದ್ದ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.
ರಾಜಿ ಸಂಧಾನಕ್ಕೆ ಮುಂದಾಗಿರುವ ಆರೋಪಿಯ ಕುಟುಂಬದ ನಿರ್ಧಾರವನ್ನು ಸ್ವಾಗತಿಸಿದ ಅವರು, ಇಂತಹ ಘಟನೆಗಳು ಯಾವುದೇ ಕುಟುಂಬದಲ್ಲಿ ಮರುಕಳಿಸದಂತೆ ಯುವಜನರು ತಮ್ಮ ಜೀವನದ ನಿರ್ಣಯಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

























