ಬಂಟ್ವಾಳ: ಕೆದಿಲ ಹಾಗೂ ಪೆರಾಜೆ ಗ್ರಾಮದ ಗಡಿಭಾಗದಲ್ಲಿರುವ ಸ್ವಾಗತ ನಗರ ಎಂಬಲ್ಲಿ 14 ಎಕರೆ 56 ಸೆನ್ಸ್ ಗೋಮಾಳವನ್ನು ಅತಿಕ್ರಮಣ ಮಾಡಿರುವುದಾಗಿ ಆರೋಪಿಸಲಾಗಿದ್ದು, ಅತಿಕ್ರಮಣ ಮಾಡಿದ ಜಾಗದಲ್ಲಿ ಕಟ್ಟಿದ ಅಕ್ರಮ ಕಟ್ಟಡವನ್ನು ಶಾಸಕರ ಸೂಚನೆ ಮೇರೆಗೆ ಇಲಾಖಾ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಗೋಮಾಳವನ್ನು ಅತಿಕ್ರಮಣ ಮಾಡಿರುವುದರ ವಿರುದ್ದ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಗೋಭಕ್ತರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಕಳೆದ 4 ದಿನಗಳಲ್ಲಿ ಮತ್ತೆ ಹೊಸದಾಗಿ ಅಕ್ರಮ ಕಟ್ಟಡವನ್ನು ಕಟ್ಟಲಾಗಿದ್ದು, ಇದರ ವಿರುದ್ದ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿತ್ತು.

ವಾರದ ಒಳಗೆ ಅತಿಕ್ರಮಣ ತೆರವು ಗೊಳಿಸದಿದ್ದರೆ ಜಾಗರಣ ವೇದಿಕೆ ಕಾರ್ಯಕರ್ತರು ಅಕ್ರಮ ಕಟ್ಟಡ ತೆರವು ಗೊಳಿಸುವುದಾಗಿ ತಿಳಿಸಿತ್ತು.
ಹಿಂದೂ ಜಾಗರಣ ವೇದಿಕೆಯ ಹೋರಾಟಕ್ಕೆ ಸ್ಪಂದಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ರವರು ಮಾ.1 ರಂದು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ 24 ಗಂಟೆಯೊಳಗೆ ಅಕ್ರಮ ಕಟ್ಟಡ ತೆರವು ಗೊಳಿಸುವಂತೆ ಸೂಚನೆ ನೀಡಿದ್ದರು.
ಮಾ.2 ರಂದು ಆರ್. ಐ ರವರ ನೇತೃತ್ವದ ತಂಡ ಗೋಮಾಳ ಒತ್ತುವರಿಯಾದ ಅಕ್ರಮ ಕಟ್ಟಡವನ್ನು ತೆರವುಗೊಳಿಸಿದೆ.
ಈ ಹೋರಾಟ ಗೋಮಾಳದ ಎಲ್ಲಾ ಅಕ್ರಮ ಒತ್ತುವರಿ ತೆರವು ಆಗುವವರೆಗೂ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಮಾತೃಸುರಕ್ಷಾ ಪ್ರಮುಖ್ ಗಣರಾಜ ಭಟ್ ಕೆದಿಲ ತಿಳಿಸಿದ್ದಾರೆ..