ನಮೀಬಿಯಾದಿಂದ ಭಾರತಕ್ಕೆ ತಂದಿದ್ದ ಹೆಣ್ಣು ಚೀತಾ 4 ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳ ಜನನ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಗಿದೆ. ಬರೋಬ್ಬರಿ 70 ವರ್ಷದ ಬಳಿಕ ಮೊದಲ ಬಾರಿಗೆ ಭಾರತದ ನೆಲದಲ್ಲಿ ಚೀತಾ ಮರಿಗಳಿಗೆ ಜನ್ಮ ನೀಡಿದೆ.
ಭಾರತದಲ್ಲಿ ಚೀತಾ ಸಂತತಿ ಕಣ್ಮರೆಯಾದ ಹಿನ್ನೆಲೆಯಲ್ಲಿ 2022 ಸೆಪ್ಟೆಂಬರ್ನಲ್ಲಿ ನಮೀಬಿಯಾದಿಂದ 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನ ತರಲಾಗಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಚೀತಾಗಳ ವೀಕ್ಷಣೆ ಮಾಡಿದ್ರು.
ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ಬಂದಿದ್ದ ಸಿಯಾ ಹೆಸರಿನ ಚೀತಾ 4 ಮರಿಗಳಿಗೆ ಜನ್ಮ ನೀಡಿದೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ಮುದ್ದಾದ ಚೀತಾ ಮರಿಗಳ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ವಿಡಿಯೋವನ್ನ ತನ್ನ ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ್ದು, ಅದ್ಭುತವಾದ ಸುದ್ದಿ ಎಂದಿದ್ದಾರೆ.
ಇತ್ತೀಚಿಗೆ ನಮೀಬಿಯಾದಿಂದ ಭಾರತಕ್ಕೆ ತಂದಿದ್ದ ಚೀತಾಗಳಲ್ಲಿ 5 ವರ್ಷದ ಹೆಣ್ಣು ಚೀತಾ ಕಿಡ್ನಿ ಸೋಕಿನಿಂದ ಕೊನೆಯುಸಿರೆಳೆದಿತ್ತು. ಭಾರತಕ್ಕೆ ಬರುವ ಮುನ್ನವೇ ಇದಕ್ಕೆ ಕಿಡ್ನಿ ಸಮಸ್ಯೆ ಇತ್ತು. ಆಪರೇಷನ್ ಮಾಡಿದ್ರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ ಎನ್ನಲಾಗಿತ್ತು. ಈ ಕಹಿಸುದ್ದಿ ಮಾಸುವ ಮುನ್ನ ಸಿಯಾ ಹೆಸರಿನ ಚೀತಾ 4 ಮರಿಗಳಿಗೆ ಜನ್ಮ ನೀಡುವ ಮೂಲಕ ಸಂತಸಕ್ಕೆ ಕಾರಣವಾಗಿದೆ.
Wonderful news. https://t.co/oPvVBNlhqC
— Narendra Modi (@narendramodi) March 29, 2023


























