ಅದ್ಭುತ… ಪ್ರಚಾರದ ಭರ. ವ್ಯಕ್ತಿಯ ಒಂದೊಂದು ಮತಗಳ ಅಗತ್ಯತೆ ಮತ್ತು ಸಂಗ್ರಹಿಸುವ ಯತ್ನ. ಶಾಲೆಯಲ್ಲಿ ಮಕ್ಕಳ ಆಟದಂತೆ ದಿನಕ್ಕೊಂದು ಅರ್ಥವಿಲ್ಲದ ಭರವಸೆಗಳು. ಜೊತೆಗೆ ಬೊಕ್ಕಸವನ್ನೆ ಮರೆತು ಒಮ್ಮೆ ಸರಕಾರ ನಮ್ಮದಾಗಲಿ ಆಮೇಲೆ ನೋಡೋಣ ಎಂಬ ಕೌತುಕ. ಅಲ್ಲೆಷ್ಟು, ಇಲ್ಲೆಷ್ಟು ಸಿಗಬಹುದೆಂಬ ಲೆಕ್ಕಾಚಾರ. ತಮ್ಮ ತಮ್ಮ ಅಹಂ ಬಿಟ್ಟು ಸಜ್ಜನರಂತೆ ಹಾಯ್.. ಬಾಯ್… ಮಾಡುತ್ತಾ ಮಡಿವಂತಿಕೆಯಲ್ಲಿ ರಾತ್ರಿ – ಹಗಲು ವೃತಾಚಾರ ಮಾಡುತ್ತಿರುವ ನಾಯಕರು.ಯುವ ಮತದಾರರಿಗೆ ಮತ ಚಲಾಯಿಸುವ ತವಕ, ಊರ ಕಟ್ಟ ಕಡೆಯ ರಾಜಕೀಯ ನೇತಾರರಿಗೆ ತಮ್ಮ ರಾಜಕೀಯ ವಾಕ್ ಸಂಪತ್ತನ್ನು ಬಿತ್ತರಿಸುವ ಸಮಯ ಮತ್ತು ಹೊಸ ಮತದಾರರ ಸೇರ್ಪಡೆಯ ಸಂಭ್ರಮ.
ಎಲ್ಲವೂ ಕಲರ್ ಫುಲ್. ಆದರೆ ಇವೆಲ್ಲವೂ ಮತ ಎಣಿಕೆಯ ಮರುದಿನ ಮಡಚಿಡುವ ಚಾಪೆ ಎಂದು ಮೊದಲೇ ಅರ್ಥಯಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ಚುನಾವಣೆಗೆ ಮಳೆಯೂ ರಜಾ ಕೊಟ್ಟ ಹಾಗಿದೆ. ದಕ್ಷಿಣಕನ್ನಡ ವಂತು ಸುಟ್ಟ ಬದನೆಯಂತಾಗಿದೆ. “ಬರ ಬರದೆ ಗಂಟಲ ತೇವ ಬರಿದಾಗದಿರೆ ಲೇಸು ಎಂಬಂತಾಗಿದೆ ಪರಿಸ್ಥಿತಿ ನಮ್ಮದು “. ಮೊದಲೇ ಪಕ್ಷಾಡಳಿತದ ಜ್ಯೋತಿಷ್ಯ, ಪಕ್ಷದ ಸ್ಪೆಷಲ್ ಗ್ಯಾರಂಟಿ ಕಾರ್ಡ್, ಆಂತರಿಕ ಪೈಪೋಟಿಯ ಪಕ್ಷ ವೈವಿದ್ಯ. ರಾಜಕೀಯ ಕಾರ್ಯಕಾರಿಣಿ ಸಭೆಗಳಿಗೆ ನಮ್ಮೂರ ಭಾಷಣಕಾರರ ಕೊರತೆಗೆ ಪರರಾಜ್ಯಗಳಿಂದ ರಾಜಕೀಯ ಭಾಷಣಕಾರರ ಆಮದು, ಅಲ್ಲೂ ಮಹತ್ತರ ಹೋರಾಟ. ಪಾಪ ಈ ವರ್ಷದ ಪ್ರಚಾರ ಪ್ರದಾನ ನೇತಾರರಿಗಂತೂ ನಿದ್ದೆ ಬಿಡುವ ಗ್ರಹಚಾರ.
ಪೊಲೀಸ್, ಶಿಕ್ಷಣ, ಸರಕಾರಿ ಕಚೇರಿ ಸಿಬ್ಬಂದಿಗಳಿಗಂತೂ ಯಾಕಾದರೂ ಸರಕಾರಿ ಕೆಲಸ ಬೇಕಿತ್ತು ಎಂಬಷ್ಟು ತ್ರಾಸು, ಒಮ್ಮೆ ಮೇ 10 ಕಳೆದರೆ ಸಾಕು ಎಂದು ಸರ್ವ ತ್ಯಾಗವನ್ನು ಚುನಾವಣೆಗೆ ಮೀಸಲಿಟ್ಟ ಹಾಗಿದೆ.ಹೊಸ ಅಂಚೆ ಮತದಾನ ಹಿರಿ ಪ್ರಜೆಗಳಿಗೆ ನಗೆ ತಂದಿದೆ. ಯಾವುದಕ್ಕೂ ಈ ಸುವ್ಯವಸ್ಥೆ ಅವ್ಯವಸ್ಥೆಯ ಗೂಡಾಗದಿರಲಿ. ಸ್ಥಳೀಯ ರಾಜಕೀಯ ಮುಖಂಡರಿಗೆ ಕಣ್ಣೆಲ್ಲ ಕಿವಿಯಾಗಿಸಿ, ಪರ ವಿರೋಧ ಗುಸು ಗುಸು ಸುದ್ದಿಗಳ ಸಂಗ್ರಹ ವ್ಯತ್ತಿರಿಕ್ತ ಕ್ರಿಯಾಶೀಲತೆ, ತಮ್ಮೂರಿನ ಸದಸ್ಯರ ಮನವೊಲಿಸುವ ತಾಕಲಾಟ. ದಿನಕ್ಕೊಂದು ಕಡೆ ಜನ ಸೇರಿಸುವ ಸ್ಟ್ರೆಸ್. ಕಟೌಟ್ ಸರಕಾರದ ದೋರಣೆಯಿಂದ ಸ್ವಲ್ಪ ಕಡಿಮೆಯಾಗಿ ಪರಿಸರ ಸ್ವಚ್ಛವಾಗಿದೆ.
ಏನೂ ಅರಿಯದ ಶಾಲಾ ಮಕ್ಕಳಿಗೆ ಈ ಬೇಸಿಗೆ ರಜೆ ಚುನಾವಣಾ ರಜೆಯಾಗಿ ಬಿಟ್ಟಿದೆ ಎಂದರೆ ತಪ್ಪಾಗಲಾರದು, ಅಪ್ಪ ಅಮ್ಮನ ಡ್ಯೂಟಿಯಿಂದ ತೆಪ್ಪಗಾಗಿ ಮನೆಯಲ್ಲಿದ್ದಾರೆ, ಮೊಬೈಲ್,ಟಿವಿ ಇದ್ದದ್ದರಿಂದ ಬಚಾವ್. ಪತ್ರಿಕಾ ಮಾಧ್ಯಮಗಳ ಮುಖ ಪುಟದಲ್ಲಿ ಹಗರಣಗಳ ಶೇಕಡವಾರು ಲೆಕ್ಕಾಚಾರ ಸೂಪರ್. ಚಾನಲ್ಗಳ ಚುನಾವಣಾ ವೈಭವ ಬಣ್ಣಿಸಲಸದಳವು.
ಬಂಧುಗಳೇ ನಿಮ್ಮಲ್ಲಿ ಒಂದೇ ವಿನಂತಿ ಬದಲಾವಣೆಯಾಗುವುದು ಆಡಳಿತ ಮಾತ್ರ, ಸಂಬಂಧ, ಮನಸುಗಳದ್ದಲ್ಲ. ನಾಳೆ ನಾವು ಒಟ್ಟಾಗಿ ಬದುಕು ಬಾಳಬೇಕು. ಆರಿಸಿದ ನಾಯಕರು ನಾಳೆ ಒಂದೇ ಸೂರಿನಡಿಯಲ್ಲಿರುತ್ತಾರೆ. ಆಗ ನಮ್ಮ ದುಡಿಮೆಯ ಫಲ ನಮ್ಮದಷ್ಟೇ. ಸಾಮಾಜಿಕ ವ್ಯವಸ್ಥೆ ನಮ್ಮ ನಮ್ಮ ಬದುಕಿನ ಶುಚಿತ್ವದಿಂದಲಷ್ಟೆ ಹೊರತು ರಾಜಕೀಯ ಬದಲಾವಣೆಯಿಂದಾಗುವುದಿಲ್ಲ. ಆಶ್ವಾಸನೆ, ಭರವಸೆಗಳು ನಾಳೆ ಕಟ್ಟಿದ ಮೂಟೆಯಲ್ಲಿಡುವ ಸೊತ್ತು ಅಷ್ಟೇ. ಬಿಚ್ಚಲೂ ಬಹುದು ಹಾಗೇ ಇರಲೂ ಬಹುದು. ಯಾವುದಕ್ಕೂ ಮತವೊಂದನ್ನು ಹಾಕಲು ಮರೆಯದಿರಿ ಅದು ನಿಮ್ಮ ಹಕ್ಕು. ಆಯ್ಕೆಯ ವಿಚಾರ ನಿಮ್ಮಲ್ಲಷ್ಟೇ ಇರಲಿ.
🖊️ರಾಧಾಕೃಷ್ಣ ಎರುಂಬು.