ತುಳುನಾಡಿನಲ್ಲಿ ಕನ್ನಡ ಸಿನಿಮಾಗಳನ್ನು ಹೇಗೇ ಪ್ರೇಕ್ಷಕರು ಇಷ್ಟ ಪಡುತ್ತಾರೋ ಹಾಗೆಯೇ ಕೋಸ್ಟಲ್ ವುಡ್ ನಲ್ಲಿ ಮೂಡಿ ಬರುವ ತುಳು ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಇತ್ತೀಚಿಗೆ ತುಳು ಸಿನಿಮಾ ‘ಪಿರ್ಕಿಲು’ ಬಿಡುಗಡೆಗೊಂಡಿದ್ದು, ಪ್ರೇಕ್ಷಕರ ಮನಗೆದ್ದು, ಉತ್ತಮ ಪ್ರದರ್ಶನ ನೀಡುತ್ತಿದೆ.
ಪುತ್ತೂರಿನ ಜಿ.ಎಲ್ ಒನ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ಕೂಡ ‘ಪಿರ್ಕಿಲು’ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಪ್ರೇಕ್ಷಕರು ಹಲವಾರು ಸಂಖ್ಯೆಯಲ್ಲಿ ಸಿನಿಮಾ ನೋಡಲು ಆಗಮಿಸುತ್ತಿದ್ದಾರೆ.
ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಞಾವು ನಿರ್ಮಾಣದಲ್ಲಿ ಹೆಚ್.ಡಿ ಆರ್ಯ ನಿರ್ದೇಶನದಲ್ಲಿ ಪಿರ್ಕಿಲು ಸಿನಿಮಾ ಮೂಡಿಬಂದಿದ್ದು, ಸಿನಿಮಾಕ್ಕೆ ಮೂರು ಹಂತದಲ್ಲಿ ಸುಳ್ಯ, ಪುತ್ತೂರು, ಮಂಗಳೂರು, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು.
ಪಿರ್ಕಿಲು ತುಳು ಸಿನಿಮಾ ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರವಾಗಿದ್ದು, ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದನ್ನು ಹಾಸ್ಯಭರಿತವಾಗಿ ಸಂದೇಶ ಸಾರುವುದೇ ಚಿತ್ರದ ಒನ್ ಲೈನ್ ಸ್ಟೋರಿ ಆಗಿದೆ. ಎಲ್ಲ ವರ್ಗದ ಜನರು ಇಷ್ಟ ಪಡುವ ಕತೆಯನ್ನು ಹಾಸ್ಯಭರಿತವಾಗಿ ಹೆಣೆಯಲಾಗಿದೆ.
ನಿರ್ದೇಶಕ ಹೆಚ್.ಡಿ. ಆರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಬಿತ ತುಳು ಸಂಭಾಷಣೆ ತರ್ಜುಮೆ ಮಾಡಿದ್ದಾರೆ.
ತಾರಾ ಬಳಗದಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಬೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ ಪ್ರಮುಖ ಪಾತ್ರದಲ್ಲಿದ್ದಾರೆ.
ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜ, ಲತಾ ಎಸ್.ಗೌಡ ಅಭಿನಯಿಸಿದ್ದಾರೆ. ಹಲವು ಮಂದಿ ತಾರೆಯರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಮುಂದಿನ ದಿನಗಳಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತು ಸಿನಿಮಾ ಉತ್ತಮ ಪ್ರದರ್ಶನ ಕಾಣಲಿ ಎಂಬುದು ಎಲ್ಲರ ಆಶಯವಾಗಿದೆ..


























