ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಮಂಜೇಶ್ವರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಭಾರಿ ನಿರೀಕ್ಷೆ ಇತ್ತು. ಬಿಜೆಪಿ ಅಭ್ಯರ್ಥಿ ಯಾಗಿದ್ದ ಸುರೇಂದ್ರನ್ 2016ರಲ್ಲಿ ಲೀಗ್ ಅಭ್ಯರ್ಥಿ ಅಬ್ದುಲ್ ರಝಾಕ್ ಅವರಿಂದ 87 ಮತಗಳಿಂದ ಸೋಲು ಕಂಡಿದ್ದರು. ರಝಾಕ್ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಕುಂಟಾರು ರವೀಶ್ ತಂತ್ರಿ 5 ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಈ ಬಾರಿ ಸುರೇಂದ್ರನ್ ಮತ್ತೆ ಸ್ಪರ್ಧಿಸಿ ಕುತೂಹಲ ಮೂಡಿಸಿದ್ದರು.
ಮಂಜೇಶ್ವರ ಕ್ಷೇತ್ರ ಗೆಲ್ಲಲು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಭಾರಿ ಪ್ಲಾನ್ ಗಳನ್ನು ಮಾಡಿತ್ತು. ಸ್ವತಃ ಅಮಿತ್ ಶಾ ಅವರೆ ಮಂಜೇಶ್ವರ ಸ್ಥಾನ ಗೆಲ್ಲಲು ಪ್ಲಾನ್ ಮಾಡಿದ್ದರು. ಕರ್ನಾಟಕದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೂ ಈ ಬಾರಿಯು ಬಿಜೆಪಿಗೆ ಸೋಲಾಗಿದೆ.
ಇದುವರೆಗಿನ ರಾಜಕೀಯ ಇತಿಹಾಸವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಬದಲಾಯಿಸುವತ್ತ ಹೊರಟಿದೆ. ರಾಜ್ಯದಲ್ಲಿ ಸತತವಾಗಿ ಅಧಿಕಾರ ಹಿಡಿಯುವತ್ತ ಎಡರಂಗ ಸರ್ಕಾರ ಮುನ್ನುಗ್ಗುತ್ತಿದೆ. ಎಲ್ ಡಿಎಫ್ 96 ಕ್ಷೇತ್ರದಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 43 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಬಂಗಾಳದಲ್ಲಿ ಆಡಳಿತ ಪಕ್ಷ ಟಿಎಂಸಿ ಬಿಜೆಪಿಗಿಂತ ಎರಡು ಪಟ್ಟು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಂಗಾಳದಲ್ಲಿ ಎಡಪಕ್ಷಗಳು ತಮ್ಮ ಅಸ್ತಿತ್ವ ತೋರುವಲ್ಲಿ ಎಡವಿದೆ. ಟಿಎಂಸಿ 209 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 78 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.