ನವರಾತ್ರಿ ಹೆಸರೇ ಹೇಳುವ ಹಾಗೆ 9 ರಾತ್ರಿಗಳ ಉತ್ಸವ.. ನವರಾತ್ರಿಗೆ ತನ್ನದೇ ಆದ ವಿಶಿಷ್ಟ ಧಾರ್ಮಿಕ ಹಿನ್ನೆಲೆ ಇದೆ. ನವರಾತ್ರಿ ಆಚರಣೆಗೆ ಸಂಬಂಧಿಸಿದ ಉಲ್ಲೇಖ ನಮ್ಮ ಅನೇಕ ವೇದ ಪುರಾಣಗಳಲ್ಲಿ ಪುಣ್ಯ ಕಥೆಗಳಲ್ಲಿದೆ..
ನವರಾತ್ರಿ ಉತ್ಸವವನ್ನು ನಾಡಿನೆಲ್ಲೆಡೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಕರಾವಳಿಯಲ್ಲಂತೂ ನವರಾತ್ರಿ ಬಂತೇದರೇ ಸಾಕು ಅದೇನೋ ಸಡಗರ, ಸಂಭ್ರಮ.. ಎಲ್ಲೆಡೆ ಶ್ರೀ ಶಾರದೋತ್ಸವದ್ದೆ ವೈಭವ.
ಅದೇ ರೀತಿ ಹತ್ತೂರ ಒಡೆಯನ ಸನ್ನಿಧಾನ ಪುತ್ತೂರಿನಲ್ಲಿಯೂ ನವರಾತ್ರಿ ಪೂಜೆ ಹಾಗೂ ಶ್ರೀ ಶಾರದೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ನವರಾತ್ರಿ ಉತ್ಸವವು ಅ.15 ರಿಂದ 24ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಲಿದೆ.
ಅ.15 ರಂದು ನವರಾತ್ರಿ ಪೂಜೆ ಪ್ರಾರಂಭಗೊಂಡು, ಅ.20 ರಂದು ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆದು, ಅ.24 ರಂದು ಶ್ರೀ ಶಾರದಾ ಮೂರ್ತಿಯ ವಿಸರ್ಜನೆ ನಡೆಯಲಿದೆ. ಈ ಬಾರಿ 89ನೇ ವರುಷದ ಶಾರದೋತ್ಸವವಾಗಿದ್ದು, ಬಹಳ ವೈಭವಯುತವಾಗಿ ಮೂಡಿಬರಲಿದೆ.
ಅ.24 ರಂದು ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಕಾರ್ಯಕ್ರಮವನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಲಿದ್ದು, ಶೋಭಾಯಾತ್ರೆಯ ಸಂಚಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು ರವರ ನೇತೃತ್ವದಲ್ಲಿ ಬೊಳ್ವಾರು ವೃತ್ತದಿಂದ ವೇದಘೋಷ, ಚೆಂಡೆಮೇಳ, ವಾದ್ಯವೃಂದ, ಕುಣಿತ ಭಜನೆಗಳೊಂದಿಗೆ ಶ್ರೀ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಶ್ರೀ ಶಾರದಾ ಭಜನಾ ಮಂದಿರದ ಇತಿಹಾಸ :
ಸುಮಾರು ಒಂಭತ್ತು ದಶಕಗಳ ಹಿಂದಿನ ಮಾತು. ಅಂದಿನ ಪುತ್ತೂರು ಪರಿಸರದಲ್ಲಿ ಜನರನ್ನು ನಿತ್ಯ ಬಲಿ ತೆಗೆದುಕೊಳ್ಳುತ್ತಿದ್ದ ಮಹಾಮಾರಿ ಸಾಂಕ್ರಾಮಿಕ ರೋಗ ಹಬ್ಬಿತ್ತು. ಈ ಕಾಯಿಲೆಗೆ ‘ಅಮ್ಮ’ ಎನ್ನತ್ತಿದ್ದರು. ಊರೆಲ್ಲಾ ರೋಗದ ಭಯ ಆವರಿಸಿತ್ತು. ಈ ಸಂದರ್ಭದಲ್ಲಿ ಸೀಮೆಯ ಪ್ರಧಾನ ದೈವಸ್ಥಾನ ಬಲ್ನಾಡಿನಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿತ್ತು. ಉಳ್ಳಾಲ್ತಿ ಸನ್ನಿಧಿಗೆ ತೆರಳಿದ ಪುತ್ತೂರಿನ ಜನರು ಈ ರೋಗದಿಂದ ಕಾಪಾಡುವಂತೆ ಅರಿಕೆ ಮಾಡಿಕೊಂಡರೆನ್ನಲಾಗಿದೆ.
ಶ್ರೀ ಉಳ್ಳಾಲ್ತಿ ಅಮ್ಮನವರು ನುಡಿಕಟ್ಟಿನಲ್ಲಿ ನಿತ್ಯ ಭಜನೆಯನ್ನು ಊರಿನಲ್ಲಿ ಆರಂಭಿಸಿ, ರೋಗದಿಂದ ನರಳುವವರ ಮನೆಗಳಿಗೆ ತೆರಳಿ ತುಳಸಿಕಟ್ಟೆಗೆ ಸುತ್ತು ಬಂದು ಭಜನೆ ಮಾಡಿ ಪ್ರತಿವರ್ಷ ಮಕರ ಸಂಕ್ರಮಣದ ಪರ್ವ ದಿನದಂದು ಬಲ್ನಾಡಿಗೆ ಭಜನೆಯೊಂದಿಗೆ ಬನ್ನಿ ಎಂದು ಅಭಯ ನೀಡಿದರು.
ಅಂದಿನಿಂದ ನಗರ ಭಜನೆ ಆರಂಭವಾಯಿತು. ಕ್ರಮೇಣ ಭಜನಾ ತಂಡದವರು ಸೇರಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿ ಇರುವ ಕಟ್ಟಡದಲ್ಲಿ ಭಜನಾ ಮಂದಿರವನ್ನು ಆರಂಭಿಸಿ ಶ್ರೀ ಶಾರದ ಭಜನಾ ಮಂದಿರ ಎಂಬ ಹೆಸರನ್ನಿಟ್ಟರು. ಪ್ರತಿ ಶನಿವಾರ ಭಜನಾ ಸೇವೆ ಮಾಡಿದರು. ಪುತ್ತೂರಿನ ಹಲವು ಕಡೆಗಳಲ್ಲಿ ನಗರ ಭಜನೆ ಆರಂಭವಾಯಿತು.
ಕಳೆದ ಕೆಲ ವರ್ಷಗಳ ಹಿಂದೆ ಶ್ರೀ ದೇವಳದ ಉಳ್ಳಾಲ್ತಿ ನಡೆಯ ಪಕ್ಕದಲ್ಲಿ ದಿ. ನಟ್ಟೋಜಿ ರಘುರಾಮ ರಾವ್ ಅವರು ದಾನರೂಪದಲ್ಲಿ ನೀಡಿದ ನೂತನ ಭಜನಾ ಮಂದಿರ ಕಟ್ಟಡ ನಿರ್ಮಾಣವಾಯಿತು.
ನಗರ ಭಜನೆ ಮೊಟಕುಗೊಂಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮೂರು ಸುತ್ತು ಬರುವ ಸೇವೆಗೆ ಸೀಮಿತವಾಯಿತು.
ಮಕರ ಸಂಕ್ರಮಣದ ದಿನ ಮುಸ್ಸಂಜೆ ತಪ್ಪದೇ ಶ್ರೀ ಉಳ್ಳಾಲ್ತಿ ಸನ್ನಿಧಿಗೆ ಹೋಗಿ ಬರುವ ಪದ್ಧತಿ ಇಂದಿಗೂ
ನಡೆಯುತ್ತಿದೆ.
ಬಲ್ನಾಡಿನ ದೈವಸ್ಥಾನಕ್ಕೆ ಸಂಬಂಧಿಸಿದ ಹೊಳ್ಳ ಮನೆತನದವರು ಹಲವಾರು ವರ್ಷ ಈ ಭಜನಾ ಮಂದಿರದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿದ್ದರು. ಪ್ರಸ್ತುತ ಭಜನಾ ಮಂದಿರದಲ್ಲಿ ನವರಾತ್ರಿ ವೇಳೆ ವಿದ್ಯಾರಂಭ, ಶಾರದೋತ್ಸವ ನಡೆಯುತ್ತದೆ. ಭಕ್ತರು ಇಲ್ಲಿ ಸೇವಾ ರೂಪದಲ್ಲಿ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಶ್ರೀ ಶಾರದೆಯ ಹೆಸರಿನಲ್ಲಿ ವೇಷ ಹಾಕುವವರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ :
‘ಶ್ರೀ ಶಾರದೆಯ ಹೆಸರಿನಲ್ಲಿ ಪುತ್ತೂರಿನಲ್ಲಿ ನವರಾತ್ರಿ ಸಂದರ್ಭದ ಯಾರೆಲ್ಲಾ ವೇಷ ಹಾಕುತ್ತಾರೆ ಅವರೆಲ್ಲಾ ಭಜನಾ ಮಂದಿರದಲ್ಲಿ ನಡೆಯುವ ಶಾರದೋತ್ಸವದ ಪ್ರತೀ ಕಾರ್ಯಕ್ರಮ ಸಹಿತ ಶಾರದೋತ್ಸವ ಶೋಭಾಯಾತ್ರೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಇತ್ತೀಚಿಗೆ ಜ್ಯೋತಿಷ್ಯರಲ್ಲಿ ನಡೆಸಿದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಮಾಹಿತಿ ನೀಡಿದ್ದಾರೆ.
ವೇಷಧಾರಿಗಳಿಗೆ ತೀರ್ಥ ಪ್ರೋಕ್ಷಣೆ :
ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ವೇಷಧಾರಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ತೀರ್ಥ ತಂದು ಪ್ರೋಕ್ಷಣೆ ಮಾಡಲಾಗುವುದು.
ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮ :
9 ದಿನಗಳ ಕಾಲ ನಡೆಯುವ ಶ್ರೀ ಶಾರದೋತ್ಸವದಲ್ಲಿ ಪ್ರತೀ ದಿನ ಸಾಂಸ್ಕೃತಿಕ, ಭಜನೆ ಕಾರ್ಯಕ್ರಮ ಸೇವಾ ರೂಪದಲ್ಲಿ ನಡೆಯಲಿದೆ.
ಮೆರವಣಿಗೆಯಲ್ಲಿ ಪಾಲ್ಗೊಂಡ ಸ್ತಬ್ದ ಚಿತ್ರಕ್ಕೆ ಬಹುಮಾನ :
ಈ ಬಾರಿ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆಯಲ್ಲಿ ಶಿಸ್ತುಬದ್ಧವಾಗಿ ಪ್ರದರ್ಶನ ಮಾಡುವ ಸ್ತಬ್ದ ಚಿತ್ರಕ್ಕೆ (ಟ್ಯಾಬ್ಲೋ) ಬಹುಮಾನ ದೊರಕಲಿದ್ದು, ಪ್ರಥಮ ಬಹುಮಾನವಾಗಿ ಬರೋಬ್ಬರಿ 1 ಲಕ್ಷ ರೂ. ಹಾಗೂ ದ್ವಿತೀಯ ಬಹುಮಾನವಾಗಿ 50 ಸಾವಿರ ರೂ. ದೊರಕಲಿದೆ. ಜಿಲ್ಲೆಯ ನಾನಾ ಭಾಗಗಳಿಂದ ಪಾಲ್ಗೊಳ್ಳುವ ತಂಡಗಳಿಗೆ ಮುಕ್ತ ಅವಕಾಶ ಮಾಡಲಾಗಿದೆ ಎಂದು ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.


























