ಅಮೆರಿಕದಲ್ಲಿ ಪಿಹೆಚ್ಡಿ ಓದುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ.
ಅಮೆರಿಕದ ಓಹಿಯೋದಲ್ಲಿರುವ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಮಾಡುತ್ತಿದ್ದ 26 ವರ್ಷದ ಆದಿತ್ಯ ಅದ್ಲಖಾ ಎಂಬ ವಿದ್ಯಾರ್ಥಿ ಗುಂಡೇಟಿಗೆ ಬಲಿಯಾಗಿದ್ದಾರೆ.

ನವೆಂಬರ್ 9 ರಂದು ಆದಿತ್ಯ ಅವರ ಮೇಲೆ ಗುಂಡು ಹಾರಿಸಿ ಕೃತ್ಯ ನಡೆಸಲಾಗಿದೆ. ಕೂಡಲೇ ಅವರನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಆಸ್ಪತ್ರೆ ಸೇರಿಸಿದ್ದರು. ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ನವೆಂಬರ್ 18 ರಂದು ಮೃತಪಟ್ಟಿದ್ದಾರೆ. ಆದಿತ್ಯ ಜೀವಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಪಡೆಯುತ್ತಿದ್ದರು.
ವೆಸ್ಟರ್ನ್ ಹಿಲ್ಸ್ ವಯಾಡಕ್ಟ್ನಲ್ಲಿ ಬಂದೂಕಿನಿಂದ ಗುಂಡು ಹಾರಿಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ನವೆಂಬರ್ 9 ಬೆಳಗ್ಗೆ ಈ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಸ್ಥಳೀಯರೂ ಕೂಡ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅವರ ಕಾರಿನ ಮೇಲೆ ಫೈರಿಂಗ್ ಮಾಡಲಾಗಿದೆ. ಚಾಲಕನ ಬದಿಯ ಕಿಟಕಿಯಲ್ಲಿ ಕನಿಷ್ಠ ಮೂರು ಬುಲೆಟ್ ರಂಧ್ರಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
2025ರಲ್ಲಿ ಪಿಹೆಚ್ಡಿ ಪದವಿ ಪೂರ್ಣಗೊಳಿಸುವ ಕನಸಿನಲ್ಲಿ ಆದಿತ್ಯ ಇದ್ದರು. 2018ರಲ್ಲಿ ದೆಹಲಿ ವಿವಿಯ ರಮ್ಜಾಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದರು. 2020ರಲ್ಲಿ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿದ್ದರು. ಗುಂಡು ಹಾರಿಸಿ ಅವರನ್ನು ಕೊಲೆ ಮಾಡಿರೋದಕ್ಕೆ ಯಾವುದೇ ಕಾರಣ ಇನ್ನೂ ಗೊತ್ತಾಗಿಲ್ಲ. ಪ್ರಕರಣ ಸಂಬಂಧ ಇದುವರೆಗೆ ಯಾರೂ ಕೂಡ ಅರೆಸ್ಟ್ ಆಗಿಲ್ಲ.


























