ಹಾಸನ: ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಅರ್ಜುನನ ಅಂತ್ಯಕ್ರಿಯೆ ಸಕಲೇಶಪುರ ತಾಲ್ಲೂಕು ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ನೆರವೇರಿದೆ. ಪ್ರೀತಿಯ ಅರ್ಜುನನ್ನು ಕಳೆದುಕೊಂಡ ಮಾವುತ ವಿನೋದ್ ಕಣ್ಣೀರಿಟ್ಟು ಗೋಳಾಡಿದ್ದಾರೆ. ನನ್ನ ಆನೆಯನ್ನು ಬದುಕಿಸಿಕೊಡಿ. ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲ ನನ್ನನ್ನು ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಗೋಳಾಡಿದ್ದಾನೆ.
ಮೃತ ಅರ್ಜುನನ್ನು ನೋಡಲು ಬಂದ ಮಾವುತ ವಿನೋದ್, ಅಪ್ಪಾ ಎದ್ದೇಳೋ.. ಅಪ್ಪಾ ಎದ್ದೇಳೋ ಎಂದು ಗೋಳಾಡಿದ್ದಾರೆ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ, ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದು ಮೃತ ಆನೆಯ ಎದುರು ಮಾವುತ ವಿನೋದ ಕಣ್ಣೀರಿಟ್ಟಿದ್ದಾರೆ. ಚಿನ್ನ ಎದ್ದೇಳೋ.. ಸ್ವಾಮಿ ಎದ್ದೇಳೋ.. ಅಯ್ಯೋ ಸಾರ್ ಗಜಗಾಂಭೀರ್ಯ ಇಲ್ಲ ಇವತ್ತು ಎಂದು ಮಾವುತ ವಿನೋದ್ ಅಳುತ್ತಿದ್ದ ದೃಶ್ಯ ನೋಡುಗರು ಮರುಗುವಂತೆ ಮಾಡಿದೆ.
ನನ್ನ ಮಕ್ಕಳು, ನನ್ನ ಹೆಂಡ್ತಿ, ನನ್ನ ತಂದೆ ಪಾಪ ಎಲ್ಲರೂ ಅಳುತ್ತಾ ಇದ್ದಾರೆ. ನನ್ನ ಕರ್ಮ. ಎಂತಹ ಆನೆಯನ್ನ ಮಿಸ್ ಮಾಡಿಕೊಂಡೆ ಎಂದು ಮಾವುತ ವಿನೋದ್ ಕಣ್ಣೀರು ಹಾಕಿದ್ದಾರೆ. ಅರಣ್ಯಾಧಿಕಾರಿಗಳು ಬೇಕು ಅಂತ ಮಾಡಿಲ್ಲ ಸಾರ್.. ಅರ್ಜುನನ ಬಲಗಾಲಿಗೆ ಶೂಟ್ ಮಾಡಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನೆಡುತೋಪುನಲ್ಲಿ ಅರ್ಜುನನ ಅಂತ್ಯಕ್ರಿಯೆ ನೆರವೇರಿದೆ. ರಾಜ ಮನೆತನದ ಪುರೋಹಿತ ಪ್ರಹ್ಲಾದ್ ಅವರು ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ಸರ್ಕಾರಿ ಗೌರವದೊಂದಿದೆ ಅಂತ್ಯಕ್ರಿಯೆ ಸಲ್ಲಿಸಲಾಗಿದೆ. ಕಣ್ಣೀರಿಡುತ್ತಲೇ ಆನೆಗೆ ಪ್ರದಕ್ಷಿಣೆ ಹಾಕಿದ ಮಾವುತ ವಿನೋದ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ಪ್ರೀತಿಯ ಆನೆಗೆ ಅಂತಿಮ ವಿದಾಯ ಹೇಳಿದ್ದಾನೆ.