ಹುಡುಕದಿರೋ ಜಾಗಗಳಿಲ್ಲ. ಅರಸದಿರುವ ಸ್ಥಳಗಳಲ್ಲಿ. ಒಂದಲ್ಲ ಎರಡಲ್ಲ ಬರೋಬ್ಬರಿ ನೂರಕ್ಕೂ ಹೆಚ್ಚು ಗಂಟೆ. 20ಕ್ಕೂ ಹೆಚ್ಚು ತಂಡ ಬೆಂಗಳೂರಿನ ಮೂಲೆಮೂಲೆಯಲ್ಲೂ ಹುಡುಕಾಡುತ್ತಿದ್ದಾರೆ. ಕಾಣೆಯಾದ ಆ ಜೀವಗಳಿಗಾಗಿ ನಿರಂತರ ಶೋಧ ನಡೆಯುತ್ತಿದೆ. ಈ ಹುಡುಕಾಟ ನಡೆಯುತ್ತಿರುವುದು ಯಾರೂ ಮನುಷ್ಯರಿಗಲ್ಲ. ಕಾಣೆಯಾದ ಮೂರು ಬೀದಿ ನಾಯಿಗಳಿಗಾಗಿ. ಶಾಕ್ ಆದ್ರೂ ಇದು ಸತ್ಯ. ಇದರ ಹಿಂದೆ ಮತ್ತೊಂದು ಕರುಣಜನಕ ಕಥೆಯೂ ಇದೆ. ಜೊತೆಗೆ ನಾಪತ್ತೆಯಾದ ಶ್ವಾನಗಳ ಸುಳಿವು ಕೊಟ್ಟರಿಗೆ 50 ಸಾವಿರ ರೂಪಾಯಿ ಬಹುಮಾನವೂ ಸಿಗುತ್ತೆ.
ಹೆಸರು ವಿಪ್ಲವಿ ಮಹೇಂದ್ರ. ವೃತ್ತಿಯಿಂದ ವಕೀಲೆ. ಸದ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ. ಕಾಣೆಯಾದ ಬೀದಿನಾಯಿಗಳ ನಿರಂತರ ಹುಡುಕಾಟದ ಹಿಂದಿರೋದು ಇವರೇ.
ಕಳೆದ ಹಲವು ವರ್ಷಗಳಿಂದ ಆ ನಾಯಿಗಳ ಆರೈಕೆ ಮಾಡಿದ್ದು ಇದೇ ವಿಪ್ಲವಿ. ಆದರೆ ಕಾರಣಾಂತರಗಳಿಂದ ಇಂಗ್ಲೆಡ್ ತೆರಳಿ, ಬೆಂಗಳೂರಿನಲ್ಲಿರುವ ತಮ್ಮ ಕಂಪನಿಯ ಉದ್ಯೋಗಿಗೆ ಅದರ ಹೊಣೆ ಹೊರಸಿದ್ರು. ಆದರೆ ಒಂದು ತಿಂಗಳ ಹಿಂದೆ ಪ್ರೀತಿಯಿಂದ ಆರೈಕೆ ಮಾಡ್ತಿದ್ದ ಬೀದಿನಾಯಿಗಳು ಇದ್ದಕ್ಕಿದಂತೆ ಕಾಣೆಯಾಗಿವೆ.
ಕಳೆದ ತಿಂಗಳು ನಾಪತ್ತೆಯಾದ ಶ್ವಾನಗಳಿಗೆ ನಿರಂತರ ಶೋಧ ನಡೆದಿದೆ. ಲಂಡನ್ ನಲ್ಲೇ ಕೂತು ಕೆಲ ದಿನಗಳ ಕಾಲ ಹುಡುಕಾಟದ ಮಾನಿಟರ್ ಮಾಡಿದ್ದಾರೆ. ಆದರೂ ಪ್ರೀತಿಯ ಶ್ವಾನಗಳು ಸಿಗದಾಗ ಕೆಲಸಕ್ಕೆ ರಜೆ ಹಾಕಿ ಸೀದಾ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿಂದ ಒಂದು ಕ್ಷಣವೂ ರೆಸ್ಟ್ ಮಾಡದೇ ನಗರದ ಹಲವು ಕಡೆ ನಿರಂತರವಾಗಿ ಶೋಧ ನಡೆಸ್ತಿದ್ದಾರೆ. ತಮ್ಮ ತಂಡದ ಜೊತೆ ಫೋಸ್ಟರ್ ಅಂಟಿಸಿ, ಕರಪತ್ರ ಹಂಚಿ ಬೀದಿ ನಾಯಿಗಳಿಗಾಗಿ ಹುಡುಕಾಡುತ್ತಿದ್ದಾರೆ. ಜೊತೆಗೆ ಕಾಣೆಯಾದ ಶ್ವಾನಗಳ ಸುಳಿವು ಕೊಟ್ಟರಿಗೆ 50 ಸಾವಿರ ಬಹುಮಾನ ಕೂಡ ಘೋಷಿಸಿದ್ದಾರೆ.
ಲಂಡನ್ನಲ್ಲಿ ನೆಲೆಸಿರುವ ವಿಪ್ಲವಿ ಆಗಾಗ ಬೆಂಗಳೂರಿಗೆ ಬರ್ತಾರೆ
ಕುಮಾರಪಾರ್ಕ್ ಬಳಿ ಕಂಪನಿ ಹಾಗೂ ಮನೆ ಹೊಂದಿದ್ದರುವ ವಕೀಲೆ ವಿಪ್ಲವಿ. ಸುಮಾರು ಏಳೆಂಟು ವರ್ಷಗಳಿಂದ ಮೂರು ಬೀದಿ ನಾಯಿ ಸಾಕಿದ್ದರು. ಸದ್ಯ ಲಂಡನ್ನಲ್ಲಿ ನೆಲಸಿರುವ ವಿಪ್ಲವಿ, ಬೆಂಗಳೂರಿನಲ್ಲಿ ಕಂಪನಿಯಿದ್ದ ಕಾರಣ ಆಗಾಗ ಬೆಂಗಳೂರಿಗೆ ಬರ್ತಾರೆ. ಅವರ ಅನುಪಸ್ಥಿತಿಯಲ್ಲಿ ವಿಪ್ಲವಿ ಅವರ ಕಂಪನಿಯ ಅಕೌಂಟೆಂಟ್ ಪ್ರಕಾಶ್ ಶ್ವಾನಗಳ ಪೋಷಣೆ ಮಾಡ್ತಿದ್ದರು. ನಾಯಿಗಳಿಗೆ ಪ್ರತಿನಿತ್ಯ ಮೂರು ಹೊತ್ತು ಆಹಾರ ಕೊಟ್ಟು ಆರೈಕೆ ಮಾಡುತ್ತಿದ್ದರು. ಆದರೆ ಅಕ್ಟೋಬರ್ 4ರಿಂದ 20ರ ಅವಧಿಯಲ್ಲಿ ಮೂರೂ ನಾಯಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ. ಬೀದಿ ನಾಯಿಗಳ ಹುಡುಕಿಕೊಡುವಂತೆ ಶೇಷಾದ್ರಿಪುರಂ ಠಾಣೆಗೆ ದೂರು ಕೂಡ ನೀಡಿದ್ರು. ಪಕ್ಕದ ಮನೆಯ ಚಾಲಕ ದಿಲೀಪ್ ಎಂಬಾತ ನಾಯಿಗಳನ್ನು ಬೇರೆಡೆಗೆ ಬಿಟ್ಟು ಬಂದಿದ್ದಾನೆಂದು ದೂರು ದಾಖಲಾಗಿದೆ.
ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಎಷ್ಟೆ ಹುಡುಕಿದ್ರು ನಾಯಿಗಳ ಸುಳಿವೇ ಸಿಗಲಿಲ್ಲ, ನವೆಂವರ್ 30ನೇ ತಾರೀಕು ವಿಪ್ಲವಿ ಸೀದಾ ಕೆಲಸಕ್ಕೆ ರಜೆ ಹಾಕಿ ಬೆಂಗಳೂರಿಗೆ ಬಂದು ನಿರಂತರವಾಗಿ ಬೀದಿನಾಯಿಗಳಿಗಾಗಿ ಇನ್ನೂ ಹುಡುಕಾಟ ನಡೆಸ್ತಿದ್ದಾರೆ. ಬೆಂಗಳೂರಿನ ಹಲವು ಭಾಗದ ಕ್ಯನಲ್ ಸ್ಕ್ವ್ಯಾಡ್ ಗಳ ನೆರವು ಪಡೆದು ಸರ್ಚಿಂಗ್ ನಡೆಯುತ್ತಿದೆ.
ಎಲೆಕ್ಟ್ರಿನಿಕ್ ಸಿಟಿ, ಆನೇಕಲ್ ಸೇರಿದಂತೆ ಹಲವು ಕಡೆ ಶೋಧ ನಡೆಸ್ತಿದ್ದಾರೆ. ಬಿಎಂಟಿಸಿ ಬಸ್ ಫೋಸ್ಟರ್ ಅಂಟಿಸಿ ಹುಡುಕಾಟಕ್ಕೂ ಮುಂದಾಗಿದ್ದಾರೆ. ಅಲ್ಲದೆ ವಿಪ್ಲವಿ ಅವರು ಲಂಡನ್ ಗೆ ಬೆಂಗಳೂರಿನಿಂದ ಎರಡು ಬೀದಿನಾಯಿಗಳನ್ನ ಕರೆದುಕೊಂಡು ಹೋಗಿ ಸಾಕ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಲೆಕ್ಕವಿಲ್ಲದಷ್ಟು ಬೀದಿ ನಾಯಿಗಳಿವೆ. ಹೆಜ್ಜೆ ಹೆಜ್ಜೆಗೂ ಬೀದಿ ನಾಯಿಗಳು ಸಿಗುತ್ತವೆ. ಇವು ತೊಲಗಿದರೆ ಸಾಕಪ್ಪಾ ಎಂದು ಹಿಡಿಶಾಪ ಹಾಕುತ್ತಾರೆ. ಇಂತವರ ನಡುವೆ ನಾಪತ್ತೆಯಾದ ಬೀದಿನಾಯಿಗಳಿಗಾಗಿ ಈ ರೀತಿ ಹುಡುಕ್ತಿರೋದು ಮಾತ್ರ ನಿಜಕ್ಕೂ ಗ್ರೇಟ್…


























