ಬಂಟ್ವಾಳ : ನಾಲ್ವರು ಮುಸುಕುಧಾರಿಗಳು ಮನೆಯೊಂದರಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ. ನಗ-ನಗದನ್ನು ದೋಚಿ ಪರಾರಿಯಾದ ಘಟನೆ ವಗ್ಗದಲ್ಲಿ ನಡೆದಿದೆ.
ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ಮಾಡಲಾಗಿದೆ.
ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ, ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದರು. ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂ. ಮೌಲ್ಯದ ವಿವಿಧ ಚಿನ್ನಾಭರಣಗಳು, 30 ಸಾವಿರ ನಗದು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗ-ನಗದು ದೋಚಿದ್ದಾರೆ.
ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಅವರ ಅಣ್ಣ ಆಸ್ಟಿನ್ ಪಿಂಟೋ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್, ಎಸ್.ಐ. ಹರೀಶ್ ಭೇಟಿ ನೀಡಿದ್ದಾರೆ. ಹಾಗೂ ಶ್ವಾನದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

























