ಕಳೆದ ಎರಡು ವರ್ಷಗಳಿಂದ ಕರೋನಾ ಎಂಬ ಸಾಂಕ್ರಾಮಿಕ ರೋಗವು ಜಗತ್ತನ್ನು ಜಾಲಾಡುತ್ತಿದೆ.ಈ ಕಾರಣದಿಂದ ಜನರ ಬದುಕು ಕರಾಳತೆಯಿಂದ ಕೂಡಿದೆ.ಒಂದರ ಅಲೆಯು ಸಹಜ ಸ್ಥಿತಿಗೆ ಬರುತ್ತಿದ್ದಂತೆಯೇ ಮತ್ತೆ ಎರಡನೇ ಅಲೆಯ ರೂಪಾಂತರಿ ವೈರಸ್ ವರ್ಷಾರಂಭದಲ್ಲೇ ಪಸರಿಸಿದೆ.ಇದರ ತೀವ್ರತೆ ಸಹಜ ಸ್ಥಿತಿಯಲ್ಲಿರುವಾಗಲೇ ಪ್ರಸ್ತುತ ಬ್ಲ್ಯಾಕ್ ಫಂಗಸ್ ಎಂಬ ಸಾಂಕ್ರಾಮಿಕ ಜ್ವರವು ಒಂದಷ್ಟು ಜನರ ಜೀವಗಳನ್ನು ಬಲಿ ಪಡೆದಿದೆ.
ಮತ್ತೊಂದೆಡೆ ತೌಕ್ತೆ ಚಂಡಮಾರುತವು ಕರ್ನಾಟಕ, ಗುಜರಾತ್, ಕೇರಳ, ತಮಿಳುನಾಡು ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ರುದ್ರ ನರ್ತನ ತೋರಿದ್ದು, ಹಲವಾರು ಮನೆಗಳು, ಸಾರ್ವಜನಿಕ ಆಸ್ತಿ ಪಾಸ್ತಿಗಳು,ಪ್ರಾಣ ಹಾನಿ ,ಮೀನುಗಾರಿಕೆ ಬೋಟ್ ಗಳು ಜಖಂಗೊಂಡು ಸಾವಿರಾರು ಕೋಟಿ ರೂಪಾಯಿಗಳು ನಷ್ಟ ಸಂಭವಿಸಿ, ಸಂತ್ರಸ್ತರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಕಾರ್ಯಗಳು ಕೇಂದ್ರ ರಕ್ಷಣಾ ಪಡೆಗಳ ಮೂಲಕ ಭರದಿಂದ ಸಾಗಿದೆ. ಜೊತೆಗೆ ಇದರ ಮುಂದುವರಿದ ಭಾಗವಾಗಿ ಹೊಸ ಯಾಸ್ ಚಂಡಮಾರುತದ ಮುನ್ಸೂಚನೆಯೂ ಹವಾಮಾನ ಇಲಾಖೆಗಿದ್ದು,ಇದನ್ನು ಎದುರಿಸುವಲ್ಲೂ ಜಿಲ್ಲಾಡಳಿತ, ರಕ್ಷಣಾ ಪಡೆ,ಸರಕಾರಗಳು ಸಜ್ಜುಗೊಳ್ಳಬೇಕಿದೆ.
ಇನ್ನು ಮಳೆಗಾಲಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು,ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಎದುರಾಗುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೆರೀಯಾ,ಚಿಕೂನ್ ಗುನ್ಯಾ,ಟೈಫಾಯಿಡ್ ನಂತಹ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಚ್ಚತೆಗೆ ಸ್ಥಳೀಯಾಡಳಿತಗಳು,ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ,ಪರಿಹಾರಕ್ಕೆ ಕಂದಾಯ ಇಲಾಖೆ,ಎಲ್ಲಾ ರೀತಿಯ ಪೂರ್ವ ತಯಾರಿಗಾಗಿ ಸರಕಾರಗಳು ಸನ್ನದ್ಧರಾಗಬೇಕಿದೆ.ಈಗಾಗಲೇ ಕೋವೀಡ್ ಅಲೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿನ ಗೊಂದಲ, ಆಕ್ಸಿಜನ್ ಕೊರತೆ,ಲಸಿಕೆ ಪೂರೈಕೆ, ಚಂಡಮಾರುತದ ಪರಿಹಾರ ಕಾರ್ಯದಲ್ಲೇ ಹೈರಾಣಾಗಿರುವ ಸರಕಾರಕ್ಕೆ ಮಳೆಗಾಲದ ಪ್ರಾಕೃತಿಕ ವಿಕೋಪ, ಸಾಂಕ್ರಾಮಿಕ ರೋಗಗಳ ತಡೆಯ ಬಗ್ಗೆಯೂ ಸವಾಲು ಎದುರಾಗಿದೆ.
ಜೊತೆಗೆ ಕೋವೀಡ್ ನ ಮೂರನೇ ಅಲೆಯು ಇನ್ನಷ್ಟು ಭೀಕರವಾಗಲಿದೆಯೆಂಬ ವರ್ತಮಾನವನ್ನು ಈಗಾಗಲೇ ತಜ್ಞರುಗಳು ಸರಕಾರಕ್ಕೆ ನೀಡಿದ್ದು, ಎರಡನೇ ಅಲೆಯಂತೆ ಲಘುವಾಗಿ ಸರಕಾರ ಪರಿಗಣಿಸಿದರೆ,ಮೂರನೇ ಅಲೆಯಲ್ಲಿ ಮತ್ತಷ್ಟು ಗಂಡಾಂತರ ಸೃಷ್ಟಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.ಒಂದೆಡೆ ಲಾಕ್ ಡೌನ್ ಗಳಿಂದ ಸರಕಾರದ ಆದಾಯಕ್ಕೆ ಕೊಡಲಿಯೇಟು ಬಿದ್ದರೆ, ಸಾಲು ಸಾಲು ಪ್ರಕೃತಿದತ್ತವಾಗಿ ಉಂಟಾಗುವ ಕ್ಷಾಮ,ಸಾಂಕ್ರಾಮಿಕ ರೋಗಗಳು ಜನಸಾಮಾನ್ಯರು ಮತ್ತು ಸರಕಾರಕ್ಕೆ ವರ್ಷಾಂತ್ಯದವರೆಗೂ ಸವಾಲಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.
✍🏻. ಆದರ್ಶ್ ಶೆಟ್ಟಿ ಉಪ್ಪಿನಂಗಡಿ