ವೇಣೂರು : ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಇಂದಿನಿಂದ 9 ದಿನಗಳ ಮಹಾಮಸ್ತಕಾಭಿಷೇಕದ ಸಂಭ್ರಮ. ಜಗತ್ತಿನ ಏಕೈಕ ಮಂದಸ್ಮಿತ ಏಕಶಿಲಾ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕಕ್ಕೆ ಸಿದ್ದತೆ ಪೂರ್ಣಗೊಂಡಿದೆ. ವೈರಾಗಿಗೆ ಮಾಹಾಮಜ್ಜನ ಇಂದಿನಿಂದ ಆರಂಭಗೊಳ್ಳಲಿದೆ.
ಭಗವಾನ್ ಬಾಹುಬಲಿ ಜೈನ ಸಮುದಾಯದವರ ಆರಾಧ್ಯಮೂರ್ತಿ. ಶ್ರವಣಬೆಳಗೊಳ, ಶ್ರೀಕ್ಷೇತ್ರ ಧರ್ಮಸ್ಥಳ, ಕಾರ್ಕಳ, ವೇಣೂರು ಹೀಗೆ ಹಲವೆಡೆ ಮಂದಸ್ಮಿತವಾಗಿ ನಿಂತ ಬಾಹುಬಲಿಯ ಬೃಹತ್ ಮೂರ್ತಿಗಳು ಗಮನ ಸೆಳೆಯುತ್ವೆ. ಅದ್ರಲ್ಲೂ ಶ್ರವಣಬೆಳಗೊಳ ವಿಶ್ವಪ್ರಸಿದ್ಧಿ. ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಜಗತ್ತನ್ನೆ ನಿಬ್ಬೆರಗಾಗಿಸುತ್ತೆ.
ವೇಣೂರಿನ ಬಾಹುಬಲಿಗೆ ನಾನಾ ದ್ರವ್ಯಗಳ ಮಜ್ಜನ!
ಇತಿಹಾಸ ಪ್ರಸಿದ್ಧ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಹನ್ನೆರಡು ವರ್ಷಗಳ ಬಳಿಕ ಈ ವರ್ಷ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಇಂದಿನಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಮಹಾ ಮಸ್ತಕಾಭಿಷೇಕಕ್ಕೆ ಎಲ್ಲಾ ರೀತಿಯ ಸಿದ್ದತೆ ನಡೆದಿದೆ.
ಅಷ್ಟಗಂಧ, ಹಾಲು, ಎಳನೀರು, ಕೇಸರಿಯಿಂದ ಅಭಿಷೇಕ
ಒಟ್ಟು ಒಂಬತ್ತು ದಿನಗಳ ಕಾಲ ಪ್ರತಿದಿನ ನಾನಾದ್ರವ್ಯಗಳಿಂದ ಮಜ್ಜನ ಮಾಡಲಾಗುತ್ತದೆ. ಜಲಾಭಿಷೇಕ, ಕಷಾಯ, ಕಲ್ಕಚೂರ್ಣ, ಅರಶಿನ, ಶ್ರೀಗಂಧ, ಅಷ್ಟಗಂಧ, ಹಾಲು, ಎಳನೀರು, ಕೇಸರಿ ದ್ರವ್ಯಗಳಿಂದ ಮಸ್ತಕಾಭಿಷೇಕ ನಡೆಸಲಾಗುತ್ತದೆ. ಇವತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮಸ್ತಕಾಭಿಷೇಕ ನಡೆಯಲಿದೆ. ದಿಗಂಬರ ಮುನಿಶ್ರೀಗಳಾದ 108 ಅಮೋಘ ತೀರ್ಥ ಮಹರಾಜ್ ಹಾಗೂ 108 ಅಮರಕೀರ್ತಿ ಮಹಾರಾಜ್ ಭಾಗಿಯಾಗಲಿದ್ದಾರೆ.
ಇದು ಜಗತ್ತಿನ ಏಕೈಕ ಮಂದಸ್ಮಿತ ಬಾಹುಬಲಿಯ ಏಕಶಿಲಾ ಮೂರ್ತಿ. ಒಟ್ಟು 35 ಅಡಿ ಎತ್ತರವಿದೆ. ಕ್ರಿ.ಶ 1604ರಲ್ಲಿ ಅಂದಿನ ಅಜಿಲ ಅರಸ ಮನೆತನದ ತಿಮ್ಮಣ್ಣ ಅಜಿಲರು ಈ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇವತ್ತಿನಿಂದ ಮಸ್ತಕಾಭಿಷೇಕ ನಡೆಯಲಿದ್ದು, ಇಡೀ ಜೈನ ಸಮುದಾಯ ವೇಣೂರಿನತ್ತ ಆಗಮಿಸುತ್ತಿದೆ.



























