ಮೈಸೂರು: ಕೊರೊನಾ ಸಾಂಕ್ರಮಿಕ ಕಾಲಘಟ್ಟದಿಂದ ಮುಂದಿನ ಶೈಕ್ಷಣಿಕ ವರ್ಷ ಯಾವ ರೀತಿ ಇರುತ್ತೋ ಗೊತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ಸ್ಮಾರ್ಟ್‌ಫೋನ್ ಒದಗಿಸುವ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.
ಮೈಸೂರಿನ ಡಿಡಿಪಿಐ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಸ್ಮಾರ್ಟ್‌ಫೋನ್ ವಿತರಣೆ ಸಂಬಂಧ ಈಗಾಗಲೇ ಎಲ್ಲ ಶೈಕ್ಷಣಿಕ ಜಿಲ್ಲೆಯಲ್ಲೂ ಸರ್ವೇ ನಡೆಸಲಾಗಿದೆ’ ಎಂದು ಹೇಳಿದರು.
ಹಳ್ಳಿಗಳ ಬಡ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವು ವಂಚಿತ ಮಕ್ಕಳಿಗೆ ಬಾಲ್ಯ ವಿವಾಹವಾಗಬಾರದು. ಅವರು ಬಾಲ ಕಾರ್ಮಿಕರಾಗಿರಬಾರದು. ಪ್ರಸ್ತುತ ಆನ್‌ಲೈನ್ ಶಿಕ್ಷಣಕ್ಕೆ ಸ್ಮಾರ್ಟ್‌ಫೋನ್‌ಗಳು ಅವಶ್ಯಕವಾಗಿದೆ. ಮಕ್ಕಳ ಹಾಜರಾತಿ ಮತ್ತು ಸ್ಮಾರ್ಟ್‌ಫೋನ್‌ಗಳ ಅಗತ್ಯತೆ ಕುರಿತು ವರದಿ ನೀಡುವಂತೆ ನಾನು ಎಲ್ಲಾ ಡಿಡಿಪಿಐಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ವರ್ಷಕ್ಕೆ ಒಮ್ಮೆ ಫೋನ್ ಬದಲಾಯಿಸುವುದು ಪ್ರಸ್ತುತ ಪ್ರವೃತ್ತಿ. ವಿವಿಧ ಸಂಸ್ಥೆಗಳ ಸಹಾಯದಿಂದ ಸ್ಮಾರ್ಟ್‌ಫೋನ್ ಬ್ಯಾಂಕ್ ಮಾಡಬಹುದೇ? ಎಂಬುದರ ಕುರಿತುಚರ್ಚೆ ನಡೆಯುತ್ತಿದೆ ಎಂದು ಸುರೇಶ್‌ಕುಮಾರ್ ಹೇಳಿದರು.