ಕೊರೊನಾ ಮಹಾಮಾರಿಯಿಂದಾಗಿ ಸುಮಾರು ಎರಡು ತಿಂಗಳಿನಿಂದ ಖಾಸಗಿ ಹಣಕಾಸು ಸಂಸ್ಥೆ,ಕಿರು ಹಣಕಾಸು ಸಂಸ್ಥೆ, ಸ್ವಸಹಾಯ ಸಂಘ, ಮುಂತಾದ ಸಂಘ ಸಂಸ್ಥೆಗಳಲ್ಲಿ ಸಾಲ ತೆಗೆದುಕೊಂಡು ಚಿಕ್ಕ ವ್ಯಾಪಾರ, ವಾಹನ ಸಾಲ,ವೈಯಕ್ತಿಕ ಸಾಲ, ಸಣ್ಣ ಉದ್ದಿಮೆ ನಡೆಸುತ್ತಿರುವ ಸಾವಿರಾರು ಮಧ್ಯಮ ವರ್ಗದ ಬಡವರು,ದುಡಿಯಲು ಕೆಲಸ ಇಲ್ಲದೆ,ವಾಹನಗಳಿಗೆ ಬಾಡಿಗೆ ಇಲ್ಲದೆ,ಸಣ್ಣ ಉದ್ದಿಮೆ ನಡೆಸಲು ಸಾಧ್ಯವಾಗದೇ ತೀರ ಸಮಸ್ಯೆಯಲ್ಲಿ ಸಿಲುಕಿರುತ್ತಾರೆ.
ಅದು ಮಾತ್ರವಲ್ಲದೆ ಮನೆಯ ದಿನಬಳಕೆಯ ಆಹಾರ ದಿನಸಿಗಳನ್ನು ಹೊಂದಿಸಿಕೊಳ್ಳಲಾಗದೆ ಆತಂಕದಲ್ಲಿದ್ದಾರೆ. ಇಂತಹ ಸಮಯದಲ್ಲಿ ಹಣಕಾಸು ಸಂಸ್ಥೆಯವರು ಏಕಾ ಏಕೀ ಬಡ್ಡಿ ಮತ್ತು ಅಸಲನ್ನು ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿ ಬಡ್ಡಿ ಮತ್ತು ಅಸಲನ್ನು ಕಟ್ಟದಿದ್ದರೆ ನಿಮ್ಮ ಸ್ಥಿರ ಮತ್ತು ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿರುವ ಪ್ರಕರಣಗಳ ದೂರುಗಳು ಬಂದಿರುತ್ತದೆ. ಈಗಾಗಲೇ ಕೊರೊನಾದಿಂದ ಆರ್ಥಿಕವಾಗಿ ಜರ್ಜರಿತವಾದ ಈ ಕುಟುಂಬಗಳ ನೆರವಿಗೆ ರಾಜ್ಯ ಸರಕಾರ ಮುಂದೆ ಬಂದು ಸಕಾಲವಾದ ನೆರವನ್ನು ನೀಡಬೇಕೆಂದು ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಒತ್ತಾಯಿಸುತ್ತಿದೆ.