ಮಂಗಳೂರು : ನಗರದ ಪೊಲೀಸರ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಸಾಗಾಟ ಬೃಹತ್ ಜಾಲ ಬೇಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ನಿವಾಸಿ ಮಹಮ್ಮದ್ ಫಾರೂಕ್ (24) , ಕಾಸರಗೋಡಿನ ಮಂಜೇಶ್ವರ ನಿವಾಸಿ ಮೊಯಿದ್ದಿನ್ ನವಾಸ್ (34), ಕುಶಾಲನಗರ ನಿವಾಸಿ ಸೈಯದ್ ಮಹಮ್ಮದ್(31) ಹಾಗೂ ಮಂಗಳೂರಿನ ಮುಡಿಪು ನಿವಾಸಿ ಮಹಮ್ಮದ್ ಅನ್ಸಾರ್ (23) ಎಂದು ಗುರುತಿಸಲಾಗಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ ಆರೋಪಿ ಪತ್ತೆಗಾಗಿ ಮೇಲಾಧಿಕಾರಿಗಳ ಆದೇಶದಂತೆ ಮೂಡುಬಿದಿರೆ ಪೊಲೀಸ್ ಠಾಣಾ ಪಿಎಸ್‌ಐ ಸುದೀಮ್ ಹಾಗೂ ಸಿಬ್ಬಂದಿಗಳು ಹಾಗೂ ದಕ್ಷಿಣ ಉಪವಿಭಾಗ ಸ್ಕ್ವಾಡ್ ಸಿಬ್ಬಂದಿಗಳು ಉಳ್ಳಾಲ ವ್ಯಾಪ್ತಿಯಲ್ಲಿ ಖಚಿತ ಮಾಹಿತಿಯ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮೀನು ಸಾಗಾಟದ ಕಂಟೇನರ್ ಲಾರಿ ಹಾಗೂ ಐಷಾರಾಮಿ ಕಾರಿನಲ್ಲಿ ಆಂಧ್ರ ಪ್ರದೇಶದಿಂದ ಕೇರಳದ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಆರೋಪಿಗಳು ಮಂಗಳೂರು ಸೇರಿದಂತೆ ಕೊಡಗು, ಹಾಸನ ಹಾಗೂ ಕಾಸರಗೋಡಿಗೆ ಗಾಂಜಾ ಪೂರೈಸುತ್ತಿದ್ದರು ಎನ್ನಲಾಗಿದೆ.
ಬಂಧಿತರಿಂದ 200 ಕೆ.ಜಿ ಗಾಂಜಾ, 3 ತಲವಾರು, 4 ಮೊಬೈಲ್ ಹಾಗೂ 1 ವೈಫೈ ಸೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮಹತ್ವದ ಕಾರ್ಯಾಚರಣೆ ನಡೆಸಿ ಬೃಹತ್ ಗಾಂಜಾ ಸಾಗಾಟ ಜಾಲ ಭೇದಿಸಿದ ಪೊಲೀಸ್ ತಂಡಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು 25 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.