ಮಂಗಳೂರು : ಕರಾವಳಿ ಭಾಗದಿಂದ ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ಟಿಕೆಟ್ ದರ ಬಹಳಷ್ಟು ಏರಿಕೆಯಾಗಿದೆ.
ಶಿಕ್ಷಣ ಸಂಸ್ಥೆಗಳ ವಾರ್ಷಿಕ ಬೇಸಗೆ ರಜೆ, ಈಸ್ಟರ್, ರಮ್ಜಾನ್ ಮುಂತಾದ ವಿಶೇಷ ಸಂದರ್ಭಗಳಲ್ಲಿ ಗಲ್ಫ್ ರಾಷ್ಟ್ರಗಳಲ್ಲಿರುವವರು ತಾಯ್ನಾಡಿಗೆ ಮರಳುತ್ತಾರೆ. ಇದೇ ಅವಧಿಯಲ್ಲಿ ವಿಮಾನ ಟಿಕೆಟ್ ದರವನ್ನು ಕೂಡ ಏರಿಕೆ ಮಾಡಿರುವುದು ಕರಾವಳಿ ಭಾಗದ ಪ್ರಯಾಣಿಕರಿಗೆ ಆರ್ಥಿಕ ಹೊಡೆತ ನೀಡಿದೆ.
ಕೊಲ್ಲಿ ರಾಷ್ಟ್ರಗಳಿಗೆ ಸಾಮಾನ್ಯವಾಗಿ ಟಿಕೆಟ್ ದರ 17ರಿಂದ 20 ಸಾವಿರ ರೂ. ಇರುತ್ತದೆ. ಆದರೆ ಇತ್ತೀಚೆಗೆ ದುಪ್ಪಟ್ಟಾಗಿದೆ. ದಮಾಮ್, ದುಬಾೖ, ಅಬುಧಾಬಿ, ದೋಹಾ ದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವವರು ಟೆಕೆಟ್ ಗಾಗಿ ಬರೋಬ್ಬರಿ 50 ಸಾವಿರ ರೂ. ಪಾವತಿಸಬೇಕಾಗಿದೆ.
ರಜಾ ಅವಧಿಯಲ್ಲಿ ಟಿಕೆಟ್ ದರ ಏರಿಕೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಸಣ್ಣ ಆದಾಯದ ಉದ್ಯೋಗದಲ್ಲಿ ತೊಡಗಿಕೊಂಡಿರುವ ಜನರು ಹಾಗೂ ಅವರ ಕುಟುಂಬ ಸದಸ್ಯರಿಗೆ ಆರ್ಥಿಕ ಹೊಡೆತ ನೀಡಿದಂತಾಗಿದೆ. ಟಿಕೆಟ್ ದರ ಹೆಚ್ಚಳದಿಂದಾಗಿ ಕರಾವಳಿ ಮೂಲದ ಬಹುತೇಕ ಮಂದಿಗೆ ತೊಂದರೆಯಾಗುತ್ತಿದೆ ಎಂಬ ದೂರು ವ್ಯಕ್ತವಾಗಿದೆ.




























