ಪುತ್ತೂರು : ಕೊರೊನಾ ಎಂಬದು ರಾಷ್ಟೀಯ ವಿಪತ್ತಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಆದರೆ ಇದನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದರು.
ಅವರು ಗುರುವಾರ ಪುತ್ತೂರಿನ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೊರೊನಾ ಹೆಚ್ಚಳಕ್ಕೆ ಚುನಾವಣಾ ಆಯೋಗವೂ ಕಾರಣವಾಗಿದೆ. ಇದರೊಂದಿಗೆ ನಮಸ್ತೇ ಟ್ರಂಪ್ ಕಾರ್ಯಕ್ರಮವೂ ಕಾರಣವಾಗಿದೆ. ಇದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ ಎಂದು ಹೇಳಿದರು.
ಕೊರೊನಾ ಪೀಡಿತರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವುದು ನೋವಿನ ವಿಚಾರವಾಗಿದೆ. ಇದರೊಂದಿಗೆ ವೆಂಟಿಲೇಟರ್, ಬೆಡ್ ಬ್ಲಾಕಿಂಗ್, ಇಸಿಯು, ಮೆಡಿಸಿನ್ ಕೊರತೆಗಳು, ಬ್ಲಾಕ್ ಫಂಗಸ್‌ಗೆ ಇನ್ನೂ ಸರಿಯಾದ ಔಷಧಿ ಕೊರತೆಗಳು ಸರ್ಕಾರದ ವೈಫಲ್ಯವನ್ನು ಸೂಚಿಸುತ್ತದೆ. ಸರ್ಕಾರ ಲಾಕ್‌ಡೌನ್ ಮಾಡಿರುವುದು ಸರಿಯಾಗಿದೆ. ಆದರೆ ಅದರೊಂದಿಗೆ ಜನರ ಆಹಾರದ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡಬೇಕಿತ್ತು. ಕೇರಳ ಇನ್ನಿತರ ಕೆಲ ರಾಜ್ಯಗಳಲ್ಲಿ ಜನರ ಆಹಾರದ ಸಮಸ್ಯೆಯನ್ನು ಪರಿಹರಿಸಲು ಅನೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ವ್ಯವಸ್ಥೆಗಳಾಗಬೇಕಿತ್ತು. ಇನ್ನಾದರೂ ಸರ್ಕಾರವು ವಲಸೆ ಕಾರ್ಮಿಕರಿಗೆ ಗಂಜಿ ಕೇಂದ್ರ ಸೇರಿದಂತೆ ಬಡವರ ಹಸಿವು ನೀಗಿಸಲು, ಅವರಿಗೆ ಬದುಕಲು ಬೇಕಾದ ವ್ಯವಸ್ಥೆಯನ್ನು ಮಾಡಬೇಕು. ಅದೆಲ್ಲವನ್ನೂ ಮಾಡದೆ ಲಾಕ್‌ಡೌನ್ ಮಾಡಿದಲ್ಲಿ ಜನರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಕೇರಳ ರಾಜ್ಯದಲ್ಲಿ ಲಾಕ್‌ಡೌನ್‌ಗೆ ರೂ.೨೦ಸಾವಿರ ಕೋಟಿಯ ಪ್ಯಾಕೇಜ್ ನೀಡಲಾಗಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಕೇವಲ ಒಂದು ಕೋಟಿ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಬಡವರ ಕಣ್ಣೊರೆಸುವ ತಂತ್ರ ಮಾಡಿದೆ ಎಂದು ಆರೋಪಿಸಿದರು.
ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ಪಡೆದುಕೊಂಡವರಿಗೆ ೨ನೇ ಹಂತದ ಲಸಿಕೆ ಸಿಗುತ್ತಿಲ್ಲ. ವ್ಯಾಕ್ಸಿನ್ ಕೊರತೆಯಿಂದ ಜನರಿಗೆ ತೊಂದರೆಯಾಗಿದೆ. ಹೀಗೆ ಆದಲ್ಲಿ ದೇಶದ ೧೩೦ ಕೋಟಿ ಜನರಿಗೆ ಲಸಿಕೆ ನೀಡಲು ಎಷ್ಟು ಸಮಯ ಕಾಯಬೇಕಾದೀತು ಎಂಬುದು ಪ್ರಶ್ನಾರ್ಹವಾಗಿದೆ. ಅಲೋಪತಿ ಔಷಧಿಗಳ ಬಗ್ಗೆ ಸರ್ಕಾರದ ಮಂತ್ರಿಗಳೇ ನಂಬಿಕೆ ಇಲ್ಲದಂತೆ ಮಾತನಾಡುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರ ರಾಷ್ಟೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ ಬಳಿಕ ಬಂದ ಬಿಜೆಪಿ ಸರ್ಕಾರ ಈ ಬಗ್ಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ ಸಚಿವರು ಗಂಗಾನದಿಯಲ್ಲಿ ತೇಲಿ ಬಂದಿರುವ ಹೆಣಗಳೇ ಆಡಳಿತ ಪಕ್ಷದ ನಿಷ್ಕಳಂಕತೆಗೆ ಕೈಗನ್ನಡಿಯಾಗಿದೆ. ಬಡಜನರಿಗೆ ಸೌಲಭ್ಯವನ್ನು ಇಲ್ಲದಂತೆ ಮಾಡಲು ಇದೀಗ ಬಿಜೆಪಿ ಸರ್ಕಾರವು ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕೆಲಸಕ್ಕೆ ಕೈಹಾಕಿದೆ. ಬಡವರ ಹಸಿವು ನೀಗಿಸಲೆಂದು ಹಿಂದಿನ ಕಾಂಗ್ರೆಸ್ ಸರ್ಕಾರ ರೂಪಿಸಿದ ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆದಾರರಿಗೆ ಹಣ ನೀಡದೆ ವಂಚನೆ ನಡೆಸಲಾಗುತ್ತಿದೆ. ಕೊರೊನಾ ವರಿಯರ್ಸ್ ಗಳಾದ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಸಂಬಳ ನೀಡದೆ ಸತಾಯಿಸುತ್ತಿದೆ. ತನ್ನ ಈ ಎಲ್ಲಾ ತಪ್ಪುಗಳನ್ನು ಮುಚ್ಚಿಹಾಕಲು ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷದ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ ಎಂದರು.
ಕೇಂದ್ರ ಸರ್ಕಾರದ ರೈತ ವಿರೋಧಿ ಕರಾಳ ಕಾನೂನು ವಿರೋಧಿಸಿ ಕಳೆದ ೬ ತಿಂಗಳಿಂದ ದೆಹಲಿಯಲ್ಲಿ ರೈತರ ಚಳುವಳಿ ನಡೆಯುತ್ತಿದೆ. ಈ ಚಳುವಳಿದಾರರ ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸದೆ ಮೊಂಡುತನ ಮಾಡುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮೋಹನ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ,ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ. ವಿ, ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ್,ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ, ಇಂಟೆಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಪೂರ್ಣೇಶ್ , ಆರ್ ಜಿಪಿಎಸ್ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಯಂಗ್ ಬ್ರಿಗೇಡ್ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ , ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್, ಶರೀಫ್ ಬಲ್ನಾಡ್, ಅಶ್ರಫ್ ಮುರ, ಮೋನು ಬಪ್ಪಳಿಗೆ ಉಪಸ್ಥಿತರಿದ್ದರು.