ಬೆಂಗಳೂರು : “ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪಡಿತರ ಕಾರ್ಡ್‌ನಲ್ಲಿ ಕುಚ್ಚಲಕ್ಕಿಗೆ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಗುರುವಾರ ಆಹಾರ ಸಚಿವ ಉಮೇಶ್ ವಿ. ಕತ್ತಿ ಅವರೊಂದಿಗೆ ಸಭೆ ನಡೆಸಿದ್ದು, ನವೆಂಬರ್‌ನಿಂದ ಕೆಂಪು ಕುಚ್ಚಲಕ್ಕಿ ಪೂರೈಸಲು ತೀರ್ಮಾನ ಕೈಗೊಳ್ಳಲಾಗಿದೆ” ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜನರು ಕುಚ್ಚಲಕ್ಕಿಗೆ ಬೇಡಿಕೆ ಇಟ್ಟಿದ್ದಾರೆ. ಪಡಿತರದಲ್ಲಿ ನೀಡುವ ಸಾಮಾನ್ಯ ಅಕ್ಕಿಯಲ್ಲಿ ಇಲ್ಲಿಯ ಮಂದಿ ಊಟ ಮಾಡಲು ಆಗಲ್ಲ. ಜಿಲ್ಲೆಯಲ್ಲೇ ತಯಾರಾಗುವ ಕುಚ್ಚಲಕ್ಕಿ ಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು. ಆಹಾರ ಸಚಿವರ ಜೊತೆ ಇಂದು ಸಭೆ ಮಾಡಲಾಗಿದ್ದು, ನವೆಂಬರ್‌ನಿಂದ ಕೆಂಪು ಕುಚ್ಚಲಕ್ಕಿ ಪೂರೈಸುವ ಬಗ್ಗೆ ಕೈಗೊಳ್ಳಲಾಗಿದೆ” ಎಂದಿದ್ದಾರೆ.
“ಅವಳಿ ಜಿಲ್ಲೆಗಳ ಒಟ್ಟು ಕೆಂಪು ಕುಚ್ಚಲಕ್ಕಿ ಬೇಡಿಕೆ ವಾರ್ಷಿಕ ಸುಮಾರು12 ಲಕ್ಷ ಕ್ವಿಂಟಾಲ್ ಆಗಿದ್ದು, ಇದರ ಪೂರೈಕೆಗೆ MO4, ಜಯ, ಅಭಿಲಾಷ, ಭದ್ರ ಕಜೆ, ಜ್ಯೋತಿ ಮುಂತಾದ ತಳಿಗಳನ್ನು ಖರೀದಿ ಮಾಡಲು ಕೇಂದ್ರ ಸರ್ಕಾರದ ಅನುಮತಿಗಾಗಿ ಸಭೆ ನಡೆಸಿ ಕೇಂದ್ರದ ಅನುಮತಿ ಪಡೆಯಲು ಅಗತ್ಯ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ದ.ಕ ಹಾಗೂ ಉಡುಪಿ ಜಿಲ್ಲೆಗಳ ಕೆಂಪು ಕುಚ್ಚಲಕ್ಕಿ ಬೇಡಿಕೆಯನ್ನು ಪೂರೈಸಲು ಸುಮಾರು 20 ಲಕ್ಷ ಕ್ವಿಂಟಾಲ್ ಭತ್ತದ ಪೂರೈಕೆ ಆಗಬೇಕಾಗಿದೆ. ಈ ಜಿಲ್ಲೆಗಳ ಹೊರತಾಗಿ ಮಂಡ್ಯ, ಮೈಸೂರು, ರಾಮನಗರ, ಬೆಳಗಾವಿ ಜಿಲ್ಲೆಗಳಿಂದ ಭತ್ತ ಖರೀದಿಸುವ ಬಗ್ಗೆ ಸಭೆಯಲ್ಲು ಚರ್ಚೆ ಮಾಡಲಾಯಿತು. ಕೇಂದ್ರ ಸರ್ಕಾರದ ಅನುಮತಿ ಪಡೆದು ನವೆಂಬರ್ ತಿಂಗಳಿನಿಂದ ಸ್ಥಳೀಯ ಅಕ್ಕಿ ಗಿರಣಿಗಳ ಮುಖೇನ ಕೆಂಪು ಕುಚ್ಚಲಕ್ಕಿ ಉತ್ಪಾದಿಸಿ ಪಡಿತರದ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
“ಅವಳಿ ಜಿಲ್ಲೆಗಳಲ್ಲಿ ಉತ್ಪಾದನೆಯಾಗಿ ಪೂರೈಕೆ ಆಗಬಹುದಾದ ಭತ್ತದ ಪ್ರಮಾಣ ಕಡಿಮೆಯಾದಲ್ಲಿ, ಇತರ ಜಿಲ್ಲೆಗಳಿಂದ ಭತ್ತವನ್ನು ಖರೀದಿ ಮಾಡಲಾಗುವುದು” ಎಂದು ಕರ್ನಾಟಕ ಆಹಾರ ಹಾಗೂ ನಾಗರೀಕ ಪೂರೈಕೆ ಸರಬರಾಜು ನಿಗಮ ನಿಯಮಿತದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿಯವರು ತಿಳಿಸಿದರು.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವರ ಆಪ್ತ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.