ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿ ಉರುವಾಲು ಗ್ರಾಮದ ಸಂಶುದ್ದೀನ್ ಯಾನೆ ಸಂಶು, ಕರಾಯದ ನವಾಜ್ ಮಹಮ್ಮದ್, ಯು.ನಿಜಾಮ್ ಮತ್ತು ಸರ್ಫರಾಜ್ ಎಂದು ಗುರುತಿಸಲಾಗಿದೆ. ಮೇ.28ರ ಶುಕ್ರವಾರ ಆರೋಪಿಗಳನ್ನು ನೆಕ್ಕಿಲಾಡಿ ಚೆಕ್ ಪೋಸ್ಟ್ ಬಳಿ ಸೆರೆ ಹಿಡಿದಿದ್ದು, ಅವರಿಂದ 5,50,000 ರೂ ಮೌಲ್ಯದ ಚಿನ್ನಾಭರಣ ಮತ್ತು ಮೂರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕಲ್ಲೇರಿಯಲ್ಲಿ ಅಯ್ಯಂಗರ್ ಬೇಕರಿ ವ್ಯವಹಾರ ನಡೆಸುತ್ತಿದ್ದ ಕರಾಯ ಗ್ರಾಮದ ಶರತ್ ಎಂಬವರ ಮನೆಗೆ ಜನವರಿ 14ರಂದು ಯಾರೂ ಇಲ್ಲದ ಸಮಯದಲ್ಲಿ ನುಗ್ಗಿ 3,81,000 ರೂ ಮೌಲ್ಯದ ೧೮೦ ಚಿನ್ನಾಭರಣ ಮತ್ತು 14 ಸಾವಿರ ರೂ ನಗದು ಬೆಳ್ಳಿ ಸಾಮಾಗ್ರಿ ದೋಚಿದ್ದರು.
ಮೇ 14ರಂದು ಉರುವಾಲು ಗ್ರಾಮದ ಮುರಿಯಾಳದ ಶಾಹೀದಾ ಎಂಬವರ ಮನೆಗೆ ನುಗ್ಗಿ 1,70,000 ರೂ ಮೌಲ್ಯದ ಚಿನ್ನಾಭರಣ ಮತ್ತು ನಾಲ್ಕು ಸಾವಿರ ರೂ. ನಗದು ಎಗರಿಸಿದ್ದರು.
ಈ ಎರಡು ಕಳ್ಳತನದ ಘಟನೆಗಳ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸಲು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಬಂಧಿತ ಆರೋಪಿಗಳಲ್ಲಿ ಸಂಶುದ್ದೀನ್ ಎಂಬಾತನ ವಿರುದ್ದ ಬೆಂಗಳೂರು ಉಪ್ಪಾರ ಪೇಟೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಬಂಧಿತನಾಗಿದ್ದ ಈತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.