ಗುಜರಾತ್ : ಖಾಸಗಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೋಡೆ ಕುಸಿದ ಪರಿಣಾಮ ಓರ್ವ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಡೋದರದ ವಘೋಡಿಯಾ ರಸ್ತೆ ಸಮೀಪದ ಶ್ರೀ ನಾರಾಯಣ ಖಾಸಗಿ ಶಾಲೆಯ ಮೊದಲ ಮಹಡಿಯಲ್ಲಿದ್ದ ತರಗತಿಯ ಗೋಡೆ ಕುಸಿದಿದ್ದು, ಮಧ್ಯಾಹ್ನ 12:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕದಳವೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯಾಹ್ನ 12:30 ರ ಸುಮಾರಿಗೆ ಘಟನೆ ಸಂಭವಿಸಿದೆ. ದೊಡ್ಡ ಧ್ವನಿ ಬಂದಿತು, ನಂತರ ನಾವು ಸ್ಥಳಕ್ಕೆ ಧಾವಿಸಿದೆವು. ಒಬ್ಬ ವಿದ್ಯಾರ್ಥಿಗೆ ತಲೆಗೆ ಗಾಯವಾಗಿದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಶಾಲಾ ಪ್ರಾಂಶುಪಾಲ ರೂಪಲ್ ಶಾ ಹೇಳಿದ್ದಾರೆ.
ತರಗತಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳಲಾಗಿದ್ದು, ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.


























