ಸವಣೂರು : ಮನೆಗೆ ಬೀಗ ಹಾಕಿ ಮನೆ ಮಂದಿಯೆಲ್ಲ ಟ್ರಿಪ್ ಹೋದ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿ ನಗ ನಗದು ಕಳವು ಮಾಡಿರುವ ಘಟನೆ ಸವಣೂರಿನಲ್ಲಿ ನಡೆದಿದೆ.
ಕಡಬ ತಾಲೂಕಿನ ಸವಣೂರು ನಿವಾಸಿ ಸಲೀಂ ಹಾಗೂ ಅವರ ಮನೆಯವರು ಟ್ರಿಪ್ ಗೆ ಹೋಗಿ ವಾಪಸ್ಸಾದ ವೇಳೆಗೆ ಪ್ರಕರಣ ಬೆಳಕಿಗೆ ಬಂದಿದೆ.
ಸಲೀಂರವರು ಪತ್ನಿ, ಮಕ್ಕಳೊಂದಿಗೆ ಶುಕ್ರವಾರ ಮನೆಗೆ ಬೀಗ ಹಾಕಿ ಟೂರ್ ಹೋಗಿದ್ದರು. ಟ್ರಿಪ್ ಮುಗಿಸಿಕೊಂಡು ಅ.13ರ ಭಾನುವಾರ ಮಧ್ಯರಾತ್ರಿ ವೇಳೆ ಮನೆಗೆ ವಾಪಸ್ಸು ಬಂದು ನೋಡಿದಾಗ ಮನೆಯ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿರುವುದು ಅರಿವಿಗೆ ಬಂದಿದೆ.
ಗಾಬರಿಯಿಂದ ಮನೆಯೊಳಗೆ ನುಗ್ಗಿ ಕೋಣೆ ಪ್ರವೇಶಿಸಿದಾಗ ಅಲ್ಲಿದ್ದ ಕಪಾಟು ಬಾಗಿಲು ಒಡೆದು ಅದರಲ್ಲಿದ್ದ ಚಿನ್ನ ಹಾಗೂ ನಗದು ದೋಚಿರುವುದು ಬೆಳಕಿಗೆ ಬಂದಿದೆ.
ಕಪಾಟಿನಲ್ಲಿದ್ದ ಅಂದಾಜು 2,12,000 ರೂ. ಮೌಲ್ಯದ 53 ಗ್ರಾಂ ಚಿನ್ನದ ಆಭರಣಗಳು, 4,000 ರೂ., ಮೌಲ್ಯದ ಒಂದು ಟ್ಯಾಬ್, 15,000 ರೂ. ಮೌಲ್ಯದ ಒಂದು ಟಿಸೋಟ್ ವಾಚ್ ಹಾಗೂ 30,000 ರೂ ನಗದು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



























