ಲಕ್ನೋ: ತನ್ನ ಮಗಳೊಂದಿಗೆ ಮದುವೆಯಾಗಬೇಕಿದ್ದ ಅಳಿಯನ ಜೊತೆ ಮಹಿಳೆಯೊಬ್ಬರು ಎಸ್ಕೇಪ್ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಲಿಗಢದ ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಧುವಿನ ತಾಯಿ ಅನಿತಾ ತನ್ನ ಭಾವಿ ಅಳಿಯನೊಂದಿಗೆ ಓಡಿ ಹೋಗಿದ್ದಾಳೆ. ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಾಳೆ.
ಅನಿತಾ ಮಗಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅನಿತಾ ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ.
ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ನೊಂದು ನುಡಿದಿದ್ದಾಳೆ.
ಅನಿತಾಳ ಪತಿ ಕುಮಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪೊಲೀಸರು ಅನಿತಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದಾರೆ.