ರಾಮಕುಂಜ: ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.
ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಹಳೆನೇರೆಂಕಿ ಗ್ರಾಮದ
ಮೊರೆಕಾಡಿ ನಿವಾಸಿ ವಿಶ್ವನಾಥ ಗೌಡ ಎಂ (52) ರವರು ಜೂ.18 ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಜೂ.17ರಂದು ಬೆಳಿಗ್ಗೆ ವಿಶ್ವನಾಥ ಗೌಡರು ದಿಢೀರ್
ಅನಾರೋಗ್ಯಕ್ಕೆ ಒಳಗಾಗಿದ್ದು ಮನೆಯವರು ತಕ್ಷಣ
ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಜೂ.18ರಂದು ಸಂಜೆ ಅವರು
ನಿಧನರಾಗಿರುವುದಾಗಿ ವರದಿಯಾಗಿದೆ.
ವಿಶ್ವನಾಥ ಗೌಡರವರು 1994ರಲ್ಲಿ ಚಾರ್ಮಾಡಿ
ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿದ್ದರು. ಬಳಿಕ ತಣ್ಣೀರುಪಂತ, ಕೊಣಾಲು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ 2011ರಲ್ಲಿ ಹಳೆನೇರೆಂಕಿ ಸರಕಾರಿ ಶಾಲೆಗೆ ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉತ್ತಮ ದೈಹಿಕ ಶಿಕ್ಷಣ
ಶಿಕ್ಷಕರೆಂದು ಗುರುತಿಸಿಕೊಂಡಿದ್ದ ವಿಶ್ವನಾಥ ಗೌಡರವರು ಹಳೆನೇರಂಕಿ ಶಾಲಾ ಬಾಲಕ ಹಾಗೂ ಬಾಲಕಿಯರ ಖೋ ಖೋ ತಂಡವನ್ನು ಮೈಸೂರು ವಿಭಾಗ ಮಟ್ಟಕ್ಕೆ ಕೊಂಡೊಯ್ದಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದ ಇವರು
ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದ ವೇಳೆ ಗುಡ್ಡಗಾಡು ಓಟದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ
ಪಡೆದುಕೊಂಡಿದ್ದರು. ವಾಲಿಬಾಲ್‌ನಲ್ಲೂ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಳೆನೇರಂಕಿ ಶಾಲಾ ಹಳೆವಿದ್ಯಾರ್ಥಿ ಸಂಘದ ಕಬಡ್ಡಿ ತಂಡದ ನಾಯಕರೂ ಆಗಿದ್ದ ಇವರು ಉತ್ತಮ ಕಬಡ್ಡಿ ತೀರ್ಪುಗಾರರೂ ಆಗಿದ್ದರು.
ಮೃತರು ಪತ್ನಿ ಚೇತನಾ, ಪುತ್ರರಾದ ಶ್ರವಣ್, ಮನೀಶ್‌ರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜೂ.19 ರಂದು ಬೆಳಿಗ್ಗೆ ಮೊರಂಕಾಡಿ ಸ್ವಗೃಹದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.