ಸುಳ್ಯ : ನ್ಯೂಜಿಲೆಂಡ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅರಂತೋಡು ಮೇರ್ಕಜೆಯ ಮೂಲದ ಜಯಪ್ರಕಾಶ್ (45) ಅವರು ಜೂನ್ 18 ರ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅಸೌಖ್ಯದ ಕಾರಣದಿಂದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಬ್ರೈನ್ ಟ್ಯೂಮರ್ ಇರುವುದು 3 ವಾರದ ಹಿಂದೆ ಗೊತ್ತಾಗಿತ್ತು. ಅದಕ್ಕಾಗಿ ಆಪರೇಶನ್ ಮಾಡಲು ಸಿದ್ಧತೆ ನಡೆಸಿದಾಗ ಅವರು ಅಸೌಖ್ಯ ತೀವ್ರಗೊಂಡು ಕೋಮಕ್ಕೆ ಜಾರಿದರೆನ್ನಲಾಗಿದೆ. ಶುಕ್ರವಾರ ರಾತ್ರಿ 2.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಜಯಪ್ರಕಾಶ್ ಅವರ ಪತ್ನಿ ಪುಷ್ಪಾ ಇವರೂ ನ್ಯೂಝಿಲೆಂಡ್ ನಲ್ಲಿದ್ದು, ಐದು ವಾರದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಬಾಣಂತಿಯಾಗಿದ್ದಾರೆ. ಹಿರಿಯ ಪುತ್ರಿಗೆ 6 ವರ್ಷವಾಗಿದೆ.
ದುಬೈ, ಆಸ್ಟ್ರೇಲಿಯಾ, ಸಿಂಗಾಪುರ ಮೊದಲಾದೆಡೆ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಎರಡು ವರ್ಷ ಹಿಂದೆ ನ್ಯೂಝಿಲೆಂಡ್ ಗೆ ಹೋಗಿದ್ದರು. ಅವರ ಧಿಡೀರ್ ಅಗಲಿಕೆಯಿಂದ ಕಂಗಾಲಾಗಿರುವ ಪುಷ್ಪಾರವರಿಗೆ ಅಲ್ಲಿರುವ ಭಾರತೀಯರು ಆಸರೆಯಾಗಿ ನಿಂತಿದ್ದಾರೆ. ಅಲ್ಲಿಯ ಕನ್ನಡ ಸಂಘದವರು, ಇತರ ಭಾರತೀಯ ಸಂಘ ಸಂಸ್ಥೆಯವರು, ಬಿ.ಜೆ.ಪಿ.ಯ ವಿದೇಶ್ ವಿಭಾಗ್ ದವರು ಸಹಕಾರ ನೀಡುತ್ತಿದ್ದಾರೆ.
ಅರಂತೋಡಿನ ಕಲ್ಲುಮುಟ್ಲು ನಿವಾಸಿಗಳಾಗಿರುವ ಮೇರ್ಕಜೆ ಆನಂದ ಗೌಡ ದೇವಕಿ ದಂಪತಿಯ ಪುತ್ರ ರಾಗಿರುವ ಜಯಪ್ರಕಾಶ್ ತಂದೆ, ತಾಯಿ, ಸಹೋದರರಾದ ಧನಂಜಯ ಮೇರ್ಕಜೆ, ಉಮೇಶ್ ಮೇರ್ಕಜೆ, ಸಹೋದರಿ ಪುಷ್ಪಾವತಿ ಯಶೋಚಂದ್ರ ಪರಮಲೆ, ಪತ್ನಿ ಪುಷ್ಪಾ, ಮಕ್ಕಳಾದ ಶ್ರಾವಿಕಾ ಹಾಗೂ ಶ್ರವಣ್ ರನ್ನು ಅಗಲಿದ್ದಾರೆ.