ಮುಕ್ಕೂರು : ಕಳೆದ ಒಂಭತ್ತು ವರ್ಷಗಳಿಂದ ಸಮಾಜಮಖಿ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಈ ವರ್ಷದಿಂದ ತಾಲೂಕು ಮಟ್ಟದ ನೇಸರ ವಾರ್ಷಿಕ ಪ್ರಶಸ್ತಿ ಪ್ರಧಾನಿಸಲಿದ್ದು ಈ ಬಾರಿ ಸಮಾಜ ಸೇವಾ ವಿಭಾಗದಲ್ಲಿ ರಕ್ಷಿತ್ ಕುಮಾರ್ ಪೆರುವಾಜೆ ಅವರು ಆಯ್ಕೆಯಾಗಿದ್ದಾರೆ.
ಆ.27 ರಂದು ಮುಕ್ಕೂರು ವಠಾರದಲ್ಲಿ ನಡೆಯಲಿರುವ 16 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಶಸ್ತಿ ಪ್ರಧಾನಿಸಲಿದ್ದಾರೆ. ಪೆರುವಾಜೆ ಗ್ರಾ.ಪಂ.ಅಧ್ಯಕ್ಷ, ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಸಹಿತ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ.
ರಕ್ಷಿತ್ ಕುಮಾರ್ ಪೆರುವಾಜೆ ಅವರು ಜಲಧಿ ಇವೆಂಟ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಬೆಳ್ಳಾರೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಲಯನ್ಸ್ ಕ್ಲಬ್ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.
ರಕ್ಷಿತ್ ಕುಮಾರ್ ಅವರು ತಾನು ದುಡಿದ ಆದಾಯದಲ್ಲಿ ಒಂದು ಅಂಶವನ್ನು ಸಮಾಜ ಸೇವೆಗಾಗಿ ಮೀಸಲಿರಿಸಿದ್ದು ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಸಾಮಾಗ್ರಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಭರಿಸುವಿಕೆ ಸಹಿತ ಹತ್ತಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.