ಉಪ್ಪಿನಂಗಡಿ : ಮನೆಯಂಗಳದಲ್ಲಿ ಇರಿಸಲಾಗಿದ್ದ ಆಟೋ ರಿಕ್ಷಾವೊಂದನ್ನು ಕಳ್ಳರು ಕದ್ದೊಯ್ದಿದ್ದರು. ಇದರಿಂದ ಕಂಗಲಾದ ಆಟೋ ಮಾಲೀಕ ಏನೂ ತೋಚದೆ ಕೊರಗಜ್ಜನ ಮೊರೆ ಹೋಗಿದ್ದರು. ಇದೀಗ ಕಳವಾದ ಆಟೋ ಮೂರೇ ದಿನದಲ್ಲಿ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಟ್ಟಿಬೈಲು ನಿವಾಸಿ ನವೀನ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ಕಳೆದ ಶುಕ್ರವಾರದಂದು ಅವರ ಮನೆಯಂಗಳದ ಶೆಡ್‌ನಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದರು. ಶನಿವಾರ ಮುಂಜಾನೆ ಎದ್ದು ನೋಡಿದಾಗ ರಿಕ್ಷಾ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ತನ್ನ ಜೀವನಾಧಾರವಾಗಿದ್ದ ಆಟೋ ರಿಕ್ಷಾ ಕಳವಿಗೀಡಾಗಿ ಕಂಗಾಲಾಗಿದ್ದ ನವೀನ್ ಈ ಬಗ್ಗೆ ಕೊರಗಜ್ಜ ದೈವಕ್ಕೆ ಮೊರೆ ಹೋಗಿದ್ದರು.
ಪ್ರಾರ್ಥನೆಯ ಫಲವೇನೋ ಎಂಬಂತೆ ಕಳವಿಗೀಡಾದ ಆಟೋ ರಿಕ್ಷಾವು ನಿನ್ನೆ ಉಪ್ಪಿನಂಗಡಿ ಪರಿಸರದಲ್ಲಿ ಸಂಚರಿಸುತ್ತಿದ್ದಾಗ ಆಟೋ ಚಾಲಕರು ಅದನ್ನು ಗುರುತಿಸಿ ಅಡ್ಡಗಟ್ಟಿ ಪೊಲೀಸರಿಗೊಪ್ಪಿಸಿದ್ದಾರೆ.
ಆಟೋ ರಿಕ್ಷಾವನ್ನು ಚಲಾಯಿಸುತ್ತಿದ್ದ ವ್ಯಕ್ತಿಗೆ ಕಡಬ ತಾಲೂಕಿನ ಬಿಳಿನೆಲೆಯ ಸ್ನೇಹಿತನೋರ್ವ ಇದನ್ನು ನೀಡಿರುವುದೆಂದೂ, ತಾನು ತನ್ನ ಕುಟುಂಬಸ್ಥರನ್ನು ಔಷಧಕ್ಕೆಂದು ಉಪ್ಪಿನಂಗಡಿಗೆ ಕರೆತರುತ್ತಿದ್ದಾಗ ಉಳಿದ ಆಟೋ ರಿಕ್ಷಾದವರು ಉಪ್ಪಿನಂಗಡಿ ಪರಿಸರದಲ್ಲಿ ಅಡ್ಡಗಟ್ಟಿದ್ದಾರೆಂದೂ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಿಳಿನೆಲೆಯ ವ್ಯಕ್ತಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.


























