ಪುಂಜಾಲಕಟ್ಟೆ: ಕ್ಷುಲಕ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕಡಿದು ಕೊಂದು ಬಳಿಕ ತಂದೆಯೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆ ಪುಂಜಾಲಕಟ್ಟೆ ಯಲ್ಲಿ ಜೂ.23 ರ ಬುಧವಾರ ನಡೆದಿದೆ.
ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯ ಬಳಿ ಶ್ರೀ ರಾಮ ಭಜನಾ ಮಂದಿರದ ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಬು ನಾಯ್ಕ ( 58) ತನ್ನ ಪುತ್ರ ಸಾತ್ವಿಕ್(15) ನನ್ನು ಕಡಿದು ಕೊಲೆಗೈದು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಘಟನೆ ವೇಳೆ ಬಾಬು ನಾಯ್ಕನ ಪತ್ನಿ ಸುಗಂಧಿ ಗೇರಿಬೀಜದ ಕಾರ್ಖಾನೆಗೆ ಕೆಲಸಕ್ಕೆ ತೆರಳಿದ್ದರು.
ಸಾತ್ವಿಕ್ ಪುಂಜಾಲಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮ ನೇ ತರಗತಿ ಓದುತ್ತಿದ್ದ. ಮದ್ಯವ್ಯಸನಿಯಾಗಿದ್ದ ಬಾಬು ನಾಯ್ಕ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಇಂದೂ ಕೂಡಾ ಮಧ್ಯಾಹ್ನ ಗಲಾಟೆ ಮಾಡಿದ್ದು ಬಳಿಕ ಮಗ ಸಾತ್ವಿಕ್‌ನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಪಕ್ಕಾಸಿಗೆ ಹಗ್ಗ ದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುಗಂಧಿ ಅವರು ಫೋನ್ ಮಾಡಿದಾಗ ಸಾತ್ವಿಕ್ ತೆಗೆಯದಿದ್ದಾಗ ಸಂಶಯಗೊಂಡು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಠಾಣಾಧಿಕಾರಿ ಸೌಮ್ಯಾ ಜೆ. ಸ್ಥಳದಲ್ಲಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸುದ್ದಿ ತಿಳಿದು ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮದ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಸ್ಥಳದಲ್ಲಿದ್ದು ಪ್ರಕರಣ ದಾಖಲಸಿಕೊಂಡು ತನಿಖೆ ಮುಂದುವರಿಸಿದ್ದಾರೆ.